Tuesday, June 9, 2026

spot_img

ವಯಸ್ಸಿನ ಚಂಚಲತೆಗೆ ಒಳಗಾಗಿ ಬದುಕು ಹಾಳು ಮಾಡಿಕೊಳ್ಳದಿರಿ : ನ್ಯಾ. ಎಂ. ಪುರುಷೋತ್ತಮ್

ಉಡುಪಿ : 18ರಿಂದ 20 ವರ್ಷದ ವಯಸ್ಸು ಜೀವನದ ಅತ್ಯಂತ ಸೂಕ್ಷ್ಮ ಘಟ್ಟವಾಗಿದ್ದು, ಈ ಅವಧಿಯಲ್ಲಿ ದುಶ್ಚಟಗಳು ಹಾಗೂ ತಪ್ಪು ಆಕರ್ಷಣೆಗಳಿಗೆ ಬಲಿಯಾಗದೆ ಉತ್ತಮ ಮಾರ್ಗದಲ್ಲಿ ಸಾಗಬೇಕು. ಕಾನೂನಿನ ಅರಿವು ಬೆಳೆಸಿಕೊಳ್ಳುವುದು ಪ್ರತಿಯೊಬ್ಬ ವಿದ್ಯಾರ್ಥಿಗೂ ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಎಂ. ಪುರುಷೋತ್ತಮ್ ಹೇಳಿದರು.

ಅವರು ದಂಡತೀರ್ಥ ಪಿಯು ಕಾಲೇಜಿನಲ್ಲಿ ನಡೆದ ಪೋಕ್ಸೊ ಕಾಯ್ದೆ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕ ಅಥವಾ ಬಾಲಕಿಯೊಂದಿಗೆ ಯಾವುದೇ ರೀತಿಯ ಅಸಭ್ಯ ವರ್ತನೆ ನಡೆಸಿದರೂ ಅದು ಪೋಕ್ಸೊ ಕಾಯ್ದೆಯಡಿ ಅಪರಾಧವಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಈ ಕಾಯ್ದೆಯ ಬಗ್ಗೆ ಸಮಗ್ರ ಅರಿವು ಹೊಂದಿರಬೇಕು ಎಂದು ಹೇಳಿದರು.

ಹದಿಹರೆಯದ ಆಕರ್ಷಣೆಗಳ ಪರಿಣಾಮವಾಗಿ ಅನೇಕ ಯುವಕರು ಕಾನೂನು ತೊಡಕುಗಳಿಗೆ ಸಿಲುಕುವ ಸಾಧ್ಯತೆ ಇದೆ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರೂ ಬಾಲಕಿಗೆ 18 ವರ್ಷ ಪೂರ್ಣವಾಗದಿದ್ದಲ್ಲಿ ಪೋಷಕರು ದೂರು ನೀಡಿದರೆ ಪೋಕ್ಸೊ ಪ್ರಕರಣ ದಾಖಲಾಗಿ ಬಂಧನಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಿದರು. ಆಶ್ಲೀಲ ಚಿತ್ರಗಳನ್ನು ವೀಕ್ಷಿಸುವುದು, ಅಪರಾಧದ ಮಾಹಿತಿ ತಿಳಿದಿದ್ದರೂ ಸಂಬಂಧಪಟ್ಟ ಇಲಾಖೆಗೆ ತಿಳಿಸದೇ ಇರುವುದು ಹಾಗೂ ಸುಳ್ಳು ದೂರುಗಳನ್ನು ನೀಡುವುದು ಕೂಡ ಶಿಕ್ಷಾರ್ಹ ಅಪರಾಧಗಳಾಗಿವೆ. ಆದ್ದರಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕಾನೂನುಗಳ ಬಗ್ಗೆ ತಿಳಿದುಕೊಂಡು ಇತರರಲ್ಲೂ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಂಚಾಲಕ ಡಾ. ಕೆ. ಪ್ರಶಾಂತ್ ಶೆಟ್ಟಿ ಮಾತನಾಡಿ, ಹದಿಹರೆಯದ ವಿದ್ಯಾರ್ಥಿಗಳಿಗೆ ಇಂತಹ ಕಾನೂನು ಅರಿವು ಕಾರ್ಯಕ್ರಮಗಳು ಅತ್ಯಗತ್ಯವಾಗಿದ್ದು, ಅಪರಾಧ ಮುಕ್ತ ಹಾಗೂ ಜವಾಬ್ದಾರಿಯುತ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗುತ್ತವೆ ಎಂದರು. ಕಾರ್ಯಕ್ರಮದಲ್ಲಿ ಪತ್ರಕರ್ತ ರಕ್ಷಿತ್ ಬೆಳಪು, ಪ್ರಾಥಮಿಕ ವಿಭಾಗದ ಮುಖ್ಯಸ್ಥ ಗೇಬ್ರಿಯಲ್ ಮಸ್ಕರೇನ್ಹಸ್ ಉಪಸ್ಥಿತರಿದ್ದರು. ಪ್ರಾಂಶುಪಾಲ ನೀಲಾನಂದ ನಾಯ್ಕ್ ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ಶಿವಣ್ಣ ಬಾಯರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles