ಉಡುಪಿ : ಕೇಂದ್ರ ರಸ್ತೆ ಮೂಲಸೌಕರ್ಯ ನಿಧಿ (ಸಿ.ಆರ್.ಐ.ಎಫ್.) ಯೋಜನೆಯಡಿ ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ 18 ಪ್ರಮುಖ ರಸ್ತೆಗಳಿಗೆ ದುರಸ್ತಿ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗಾಗಿ ಒಟ್ಟು ರೂ 119 ಕೋಟಿ ಅನುದಾನ ಮಂಜೂರಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಸಂಸದರ ಕಚೇರಿಯಿಂದ ಬಿಡುಗಡೆಗೊಂಡಿರುವ ಪ್ರಕಟಣೆಯ ಪ್ರಕಾರ, ಕ್ಷೇತ್ರದ ವಿವಿಧ ರಸ್ತೆಗಳಿಗೆ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಬಾಳೆಹೊನ್ನೂರು–ಶೃಂಗೇರಿ ರಸ್ತೆಗೆ ರೂ50 ಕೋಟಿ, ಕೊಪ್ಪ–ಜಯಪುರ–ಶೃಂಗೇರಿ ರಸ್ತೆಗೆ ರೂ 6 ಕೋಟಿ, ಕುಂದಾಪುರ–ಬೈಂದೂರು–ವಿರಾಜಪೇಟೆ ರಸ್ತೆಗೆ ರೂ 6 ಕೋಟಿ ಹಾಗೂ ಉಡುಪಿ–ಹಿರಿಯಡ್ಕ–ಕಾರ್ಕಳ–ಸುಬ್ರಹ್ಮಣ್ಯ ರಸ್ತೆಗೆ ರೂ 6 ಕೋಟಿ ಮಂಜೂರಾಗಿದೆ.

ಇದೇ ರೀತಿ ಬ್ರಹ್ಮಾವರ–ಜನ್ನಾಡಿ ರಸ್ತೆ ಅಭಿವೃದ್ಧಿಗೆ ರೂ 5 ಕೋಟಿ, ಬಾರ್ಕೂರು ರಸ್ತೆ ಅಭಿವೃದ್ಧಿಗೆ ರೂ 10 ಕೋಟಿ, ಶಿರೂರು–ಕೊಕ್ಕರ್ಣೆ–ಸಂತೆಕಟ್ಟೆ ರಸ್ತೆಗೆ ರೂ 3 ಕೋಟಿ, ಹಳೆ ಎಂ.ಬಿ.ಸಿ. ರಸ್ತೆಗೆ ರೂ 1.60 ಕೋಟಿ ಹಾಗೂ ಆರೂರು–ಮುಣ್ಕಿನಜಡ್ಡು–ಕೊಕ್ಕರ್ಣೆ ರಸ್ತೆಗೆ ರೂ 1.40 ಕೋಟಿ ಅನುದಾನ ಒದಗಿಸಲಾಗಿದೆ. ತೀರ್ಥಹಳ್ಳಿಯಿಂದ ಕುಂದಾಪುರ ರಸ್ತೆಗೆ ರೂ 2 ಕೋಟಿ, ಹೆಬ್ರಿ ತಾಲೂಕಿನ ಮುನಿಯಾಲು–ಕಬ್ಬಿನಾಲೆ ರಸ್ತೆಗೆ ರೂ 1 ಕೋಟಿ, ಅತ್ರಾಡಿ–ಮಂಗಳೂರು ರಸ್ತೆ ಹಾಗೂ ನಾರಾವಿ–ಮಂಗಳೂರು ರಸ್ತೆಗೆ ತಲಾ ರೂ 1 ಕೋಟಿ ಮಂಜೂರಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ವಿವಿಧ ರಸ್ತೆಗಳಿಗೆ ಸಹ ಅನುದಾನ ಬಿಡುಗಡೆಯಾಗಿದ್ದು, ಕಡೂರು ತಾಲೂಕಿನ ಬೇಗೂರು ಗೇಟ್–ಅರೇಹಳ್ಳಿ–ಮಚ್ಚೇರಿ ರಸ್ತೆಗೆ ರೂ 6 ಕೋಟಿ, ಚಿಕ್ಕಮಗಳೂರು ತಾಲೂಕಿನ ಸೀತಾಲಯ್ಯನಗಿರಿ–ಮುಳ್ಳಯ್ಯನಗಿರಿ ರಸ್ತೆಗೆ ರೂ 6 ಕೋಟಿ, ಮೂಡಿಗೆರೆ ತಾಲೂಕಿನ ಬಾಳೂರು ಹ್ಯಾಂಡ್ ಪೋಸ್ಟ್‌ನಿಂದ ಕಳಸ ರಸ್ತೆಗೆ ರೂ 6 ಕೋಟಿ ಹಾಗೂ ತರೀಕೆರೆ ತಾಲೂಕಿನ ರಾಜ್ಯ ಹೆದ್ದಾರಿ 57ರ ಅಭಿವೃದ್ಧಿಗೆ ರೂ 6 ಕೋಟಿ ಮಂಜೂರಾಗಿದೆ. ಈ ಎಲ್ಲಾ ಕಾಮಗಾರಿಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ಸಹಕಾರ ನೀಡಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಲಾಗಿದೆ ಎಂದು ಸಂಸದರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.



