ಉಡುಪಿ : ಅಂತರ್ರಾಜ್ಯ ಮಟ್ಟದಲ್ಲಿ ಮನೆ ಕಳ್ಳತನ ನಡೆಸುತ್ತಿದ್ದ ಟ್ಯಾಟೂ-313 ಗ್ಯಾಂಗ್ನ್ನು ಮಣಿಪಾಲ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ 7.90 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಬೆಂಗಳೂರು ನಿವಾಸಿ ದರ್ಶನ್ ಆರ್. (21) ಹಾಗೂ ದಾವಣಗೆರೆ ಜಿಲ್ಲೆಯ ಚಂದ್ರು (26) ಎಂದು ಗುರುತಿಸಲಾಗಿದೆ.

ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಳ್ಳಿ ಗ್ರಾಮದ ಕುಂಜಿಬೆಟ್ಟು ಮಂಚಿಕೋಡಿ ನಿವಾಸಿ ಅಮಿತ್ ಡ್ಯಾನಿಯಲ್ ಅವರು ಮಕ್ಕಳೊಂದಿಗೆ ಮನೆಯಲ್ಲಿ ವಾಸವಾಗಿದ್ದು, ಫೆಬ್ರವರಿ 3ರಂದು ರಾತ್ರಿ ಮನೆಯನ್ನು ಬೀಗ ಹಾಕಿ ತಾಯಿಯ ಮನೆಗೆ ತೆರಳಿದ್ದರು. ಮರುದಿನ ಮನೆ ಬಾಗಿಲು ತೆರೆದಿರುವ ಬಗ್ಗೆ ನೆರೆಹೊರೆಯವರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮನೆಗೆ ಬಂದು ಪರಿಶೀಲಿಸಿದಾಗ ಸುಮಾರು 75 ಗ್ರಾಂ ತೂಕದ, 7 ಲಕ್ಷ ಮೌಲ್ಯದ ಚಿನ್ನಾಭರಣ ಕಳವಾಗಿರುವುದು ಬೆಳಕಿಗೆ ಬಂದಿತ್ತು. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜೂನ್ 6ರಂದು ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಪಿಎಸ್ಐ ಶಂಭುಲಿಂಗಯ್ಯ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಶಿವಳ್ಳಿ ಗ್ರಾಮದ ಇಂದ್ರಾಳಿ ರೈಲ್ವೆ ಗೋದಾಮು ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ವೇಳೆ ಆರೋಪಿಗಳು ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ತನಿಖೆ ಮುಂದುವರಿಸಿದಾಗ ಆರೋಪಿಗಳು ಮಣಿಪಾಲ ಠಾಣೆಯ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ದೃಢಪಟ್ಟಿತು. ನ್ಯಾಯಾಲಯದಿಂದ ಪೊಲೀಸ್ ಕಸ್ಟಡಿಗೆ ಪಡೆದ ಬಳಿಕ ಆರೋಪಿಗಳ ಮಾಹಿತಿ ಮೇರೆಗೆ ಶಿವಮೊಗ್ಗದ ಲಾಡ್ಜ್ನಿಂದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಯಿತು. ವಶಪಡಿಸಿಕೊಂಡ ವಸ್ತುಗಳಲ್ಲಿ 39.70 ಗ್ರಾಂ ತೂಕದ ಕರಿಮಣಿ ಸರ, 13.30 ಗ್ರಾಂ ತೂಕದ ನೆಕ್ಲೆಸ್, 3.15 ಗ್ರಾಂ ತೂಕದ ಕಿವಿಯೋಲೆ ಹಾಗೂ 3.87 ಗ್ರಾಂ ತೂಕದ ಚಿನ್ನದ ಚೈನ್ ಸೇರಿದ್ದು, ಒಟ್ಟು 60 ಗ್ರಾಂ ತೂಕದ 7.90 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಎರಡು ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ತಮ್ಮ ಕೈಗಳಲ್ಲಿ ಟ್ಯಾಟೂ-313 ಎಂಬ ಹಚ್ಚೆ ಹಾಕಿಸಿಕೊಂಡು ಗ್ಯಾಂಗ್ ಗುರುತಿನೊಂದಿಗೆ ಕಾರ್ಯನಿರ್ವಹಿಸುತ್ತಿದ್ದರು. ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳ ರೈಲ್ವೆ ನಿಲ್ದಾಣಗಳ ಸಮೀಪದ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ರಾತ್ರಿ ವೇಳೆ ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್ ಹಾಗೂ ಕಾಲಿಗೆ ಸಾಕ್ಸ್ ಧರಿಸಿ ಕಳ್ಳತನ ನಡೆಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಆರೋಪಿಗಳ ವಿರುದ್ಧ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಹಲವು ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2025ರ ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿಯೂ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರು ಆರೋಪಿಗಳ ಬಂಧನ ಬಾಕಿಯಿದ್ದು, ಮಣಿಪಾಲ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



