Wednesday, October 14, 2026

spot_img

ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡಿ: ಬಿಎಸ್‌ಎನ್‌ಎಲ್ ಅಧಿಕಾರಿಗಳಿಗೆ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

ಉಡುಪಿ : ಜಿಲ್ಲೆಯ ಬಿಎಸ್‌ಎನ್‌ಎಲ್ ಗ್ರಾಹಕರ ನೆಟ್‌ವರ್ಕ್ ಸಂಬಂಧಿತ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿ, ಖಾಸಗಿ ಕಂಪನಿಗಳಿಗೆ ಕಡಿಮೆಯಿಲ್ಲದಂತೆ ಗುಣಮಟ್ಟದ ಸೇವೆ ಒದಗಿಸಬೇಕು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಲ್ಲಾ ಪಂಚಾಯತ್‌ನ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ನಡೆದ ಬಿಎಸ್‌ಎನ್‌ಎಲ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಉಡುಪಿ ಜಿಲ್ಲೆಯಾದ್ಯಂತ ಇರುವ ಬಿಎಸ್‌ಎನ್‌ಎಲ್ ಸ್ಥಾವರಗಳನ್ನು 3ಜಿಯಿಂದ 4ಜಿಗೆ ಉನ್ನತೀಕರಿಸಿ, ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಬೇಕು. ಟವರ್‌ಗಳ ನಿರ್ವಹಣೆಯನ್ನು ವ್ಯವಸ್ಥಿತವಾಗಿ ಕೈಗೊಂಡು, ನೆಟ್‌ವರ್ಕ್ ಸಮಸ್ಯೆಗಳು ಉಂಟಾಗದಂತೆ ಅಗತ್ಯ ಕ್ರಮ ವಹಿಸಬೇಕು ಎಂದು ತಿಳಿಸಿದರು. ಜಿಲ್ಲೆಯ ಎಲ್ಲ ಸ್ಥಾವರಗಳಲ್ಲಿ ಡೀಸೆಲ್ ಜನರೇಟರ್‌ಗಳನ್ನು (ಡಿಜಿ ಸೆಟ್) ಅಳವಡಿಸಿ, ಅವು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಪವರ್ ಪ್ಲಾಂಟ್‌ಗಳು ನಿರಂತರವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ, ಅಗತ್ಯವಿರುವ ಕಡೆಗಳಲ್ಲಿ ಬ್ಯಾಟರಿ ಅಥವಾ ಸೋಲಾರ್ ಬ್ಯಾಟರಿಗಳನ್ನು ಅಳವಡಿಸಬೇಕು ಎಂದರು.

ಹೊಸ ಟವರ್‌ಗಳ ನಿರ್ಮಾಣಕ್ಕಾಗಿ ಜಿಲ್ಲಾಡಳಿತದಿಂದ ಬೇಡಿಕೆಗೆ ಅನುಗುಣವಾಗಿ 39 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಈ ನಿವೇಶನಗಳಲ್ಲಿ ಟವರ್ ನಿರ್ಮಾಣ ಕಾರ್ಯವನ್ನು ಶೀಘ್ರ ಆರಂಭಿಸಬೇಕು. ಪೆರ್ಡೂರಿನ ಕುಕ್ಕುಂಡಿ ಪ್ರದೇಶದಲ್ಲಿ ಟವರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮರ ತೆರವುಗೊಳಿಸುವ ಕಾರ್ಯವನ್ನು ಅರಣ್ಯ ಇಲಾಖೆಯು ಆದಷ್ಟು ಬೇಗ ಕೈಗೊಳ್ಳಬೇಕು ಎಂದು ಸೂಚಿಸಿದರು. ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಹಾಗೂ ಸಮೀಪದ ಆಸ್ಪತ್ರೆಗಳಲ್ಲಿಯೂ ನೆಟ್‌ವರ್ಕ್ ಸಮಸ್ಯೆ ಕಂಡುಬರುತ್ತಿರುವ ಬಗ್ಗೆ ದೂರುಗಳಿವೆ. ಈ ಸಮಸ್ಯೆಗಳನ್ನು ಪರಿಹರಿಸಿ ನೆಟ್‌ವರ್ಕ್ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು. ಕಾಪು ಮತ್ತು ಕಮಲಶಿಲೆಯಂತಹ ಪ್ರವಾಸಿ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿಯೂ ನೆಟ್‌ವರ್ಕ್ ಸಮಸ್ಯೆಗಳ ಕುರಿತು ದೂರುಗಳು ಬರುತ್ತಿದ್ದು, ಅವುಗಳ ಪರಿಹಾರಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಬ್ರಹ್ಮಾವರ ತಾಲೂಕಿನ ಕರ್ಜೆ ಹಾಗೂ ಕಾಪು ತಾಲೂಕಿನ ಕಟಪಾಡಿಯಲ್ಲಿರುವ ಟವರ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮತ್ತು ನಾಡ್ಪಾಲು-ಕಬ್ಬಿನಾಲೆ ಪರಿಸರದಲ್ಲಿ ಮರುಸರ್ವೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಇನ್ನು ಮುಂದೆ ಪ್ರತಿ ತಿಂಗಳು ಬಿಎಸ್‌ಎನ್‌ಎಲ್ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು. ಮುಂದಿನ ಸಭೆಯೊಳಗೆ ಪ್ರಸ್ತಾಪಿತ ಸಮಸ್ಯೆಗಳು ಇತ್ಯರ್ಥವಾಗುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಸಭೆಯಲ್ಲಿ ಬಿಎಸ್‌ಎನ್‌ಎಲ್ ಬೆಂಗಳೂರು ವಿಭಾಗದ ಸಿಜಿಎಂ ಸುಕುಮಾರನ್ ಎನ್.ಕೆ., ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಪಿಜಿಎಂ ಬಿ. ವೆಂಕಟೇಶ್ವರಲು ಹಾಗೂ ಮಂಗಳೂರು ಜಿಎಂ ಹೇಮಂತ್ ಎಸ್.ಬಿ. ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles