ಉಡುಪಿ : ಕಬ್ಬು ಬೆಳೆಗಾರರು ತಾಳ್ಮೆಯಿಂದ ಇರಬೇಕು. ಕಬ್ಬಿನ ಬೆಲೆ ಸಮಸ್ಯೆ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ; ದೇಶದಾದ್ಯಂತದ ಬೆಳೆಗಾರರು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕುರಿತು ಮಹಾರಾಷ್ಟ್ರದ ನಾಯಕರೊಂದಿಗೂ ಚರ್ಚೆ ನಡೆಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಕಾಪು ತಾಲೂಕಿನ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಬಳಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳೆರಡೂ ಉಳಿಯಬೇಕು ಎಂಬುದೇ ಸರ್ಕಾರದ ಉದ್ದೇಶ. ಈ ವಿಚಾರವಾಗಿ ಕೇಂದ್ರ ಸರ್ಕಾರದ ಸಚಿವರೊಂದಿಗೂ ಚರ್ಚಿಸಲಾಗಿದ್ದು, ಅವರು ಸಭೆ ಕರೆದಿದ್ದಾರೆ ಎಂದು ಹೇಳಿದರು.

ಈ ಬಾರಿ ಮಳೆಯ ಕೊರತೆಯಿಂದ ಬೆಳೆ ಇಳುವರಿಯೂ ಕಡಿಮೆಯಾಗಿದೆ. ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಕಳೆದ ಹತ್ತು ವರ್ಷಗಳಿಂದ ಸಕ್ಕರೆ ಹಾಗೂ ಕಬ್ಬಿನ ಬೆಲೆಯಲ್ಲಿ ಗಮನಾರ್ಹ ಏರಿಕೆಯಾಗಿಲ್ಲ. ಕಳೆದ ಬಾರಿಯೂ ಕಬ್ಬು ಬೆಳೆಗಾರರಿಗೆ ನೆರವಾಗುವ ಕುರಿತು ಸರ್ಕಾರ ಘೋಷಣೆ ಮಾಡಿತ್ತು. ಆ ನೆರವನ್ನು ಮುಂದುವರಿಸಲಾಗುವುದು. ಬೆಳೆಗಾರರು ಸ್ವಲ್ಪ ತಾಳ್ಮೆಯಿಂದಿದ್ದು, ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದು ಮನವಿ ಮಾಡಿದರು.

ಎಸ್ಐಆರ್ ಹೋರಾಟದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷಭೇದವಿಲ್ಲದೆ ಪ್ರತಿಯೊಬ್ಬರ ಮತದಾನದ ಹಕ್ಕನ್ನು ಉಳಿಸಬೇಕು. ಮತದಾನವು ಸಂವಿಧಾನವು ನಾಡಿನ ಜನರಿಗೆ ನೀಡಿರುವ ಹಕ್ಕಾಗಿದ್ದು, ಅದರ ರಕ್ಷಣೆಗೆ ನಾನು ಕೆಲಸ ಮಾಡುತ್ತೇನೆ ಎಂದು ತಿಳಿಸಿದರು. ಕರಾವಳಿ ಪವಿತ್ರವಾದ ಭೂಮಿ. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ಎಂದಿಗೂ ವಿಫಲವಾಗುವುದಿಲ್ಲ. ಜನರ ಸೇವೆ ಮಾಡಲು ಹಾಗೂ ಅವರ ಸಮಸ್ಯೆಗಳನ್ನು ಬಗೆಹರಿಸಲು ಅವಕಾಶ ದೊರೆತಿದೆ. ಶ್ರೀ ಮಹಾಲಕ್ಷ್ಮೀ ದೇವಿಯ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸುವ ಉದ್ದೇಶದಿಂದ ಇಲ್ಲಿಗೆ ಬಂದಿದ್ದೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.


