ಉಡುಪಿ: ಪೊಲೀಸರನ್ನು ನಂಬಿ ದಾಖಲೆಯೊಂದಕ್ಕೆ ಹಾಕಿದ ಸಹಿಯೊಂದು ಅಮಾಯಕ ರಿಕ್ಷಾ ಚಾಲಕನನ್ನು ಒಂದೂವರೆ ವರ್ಷಗಳ ಕಾಲ ಕ್ರಿಮಿನಲ್ ಪ್ರಕರಣದ ಆರೋಪಿಯನ್ನಾಗಿ ಮಾಡಿತ್ತು. ತಾನು ಮಾಡದ ಅಪರಾಧದ ಆರೋಪ ಹೊತ್ತು ನ್ಯಾಯಾಲಯದ ಮೆಟ್ಟಿಲೇರುವಂತಾಗಿದ್ದ ಶೀನ ಪೂಜಾರಿಗೆ ಇದೀಗ ಹೈಕೋರ್ಟ್‌ನಲ್ಲಿ ನ್ಯಾಯ ದೊರೆತಿದೆ.

ಕುಂದಾಪುರ ತಾಲೂಕಿನ ಆಲೂರು ಗ್ರಾಮದ ಶೀನ ಪೂಜಾರಿ, ಎಂಡೋಸಲ್ಫಾನ್ ಪೀಡಿತ ಪತ್ನಿಯ ಚಿಕಿತ್ಸೆ, ಕಾಲೇಜಿನಲ್ಲಿ ಓದುತ್ತಿರುವ ಇಬ್ಬರು ಮಕ್ಕಳ ವಿದ್ಯಾಭ್ಯಾಸ ಹಾಗೂ ಕುಟುಂಬದ ನಿರ್ವಹಣೆಗಾಗಿ ರಿಕ್ಷಾ ಚಲಾಯಿಸಿಕೊಂಡು ಜೀವನ ಸಾಗಿಸುತ್ತಿದ್ದರು. 2025ರ ಆಗಸ್ಟ್ 24ರಂದು ಪರಿಚಯಸ್ಥ ಉದಯ ಶೆಟ್ಟಿಯವರನ್ನು ಗಂಗೊಳ್ಳಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದ ಸಂದರ್ಭದಲ್ಲಿ, ಠಾಣೆಯ ಹೊರಗೆ ರಿಕ್ಷಾದಲ್ಲಿ ಕಾಯುತ್ತಿದ್ದ ಶೀನ ಪೂಜಾರಿಯನ್ನು ಪೊಲೀಸರು ಒಳಗೆ ಕರೆಸಿ ದಾಖಲೆಯೊಂದಕ್ಕೆ ಸಹಿ ಪಡೆದಿದ್ದಾರೆ ಎನ್ನಲಾಗಿದೆ.

ಓದಲು–ಬರೆಯಲು ಬಾರದ ತಮಗೆ ಸಹಿ ಏಕೆ ಎಂದು ಪ್ರಶ್ನಿಸಿದಾಗ, ಇದು ಔಪಚಾರಿಕ ಪ್ರಕ್ರಿಯೆ ಎಂದು ತಿಳಿಸಿದ್ದರಿಂದ ಪೊಲೀಸರನ್ನು ನಂಬಿ ಸಹಿ ಹಾಕಿದ್ದಾಗಿ ಶೀನ ಪೂಜಾರಿ ತಿಳಿಸಿದ್ದಾರೆ. ಕೆಲ ದಿನಗಳ ಬಳಿಕ ನ್ಯಾಯಾಲಯದ ಸಮನ್ಸ್ ಬಂದಾಗ ಪ್ರಕರಣದ ವಿಚಾರ ತಿಳಿದು ಅವರು ಆಘಾತಕ್ಕೊಳಗಾದರು. ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಲ್ಲುಕೋರೆ ನಡೆಸಿ ಕೆಂಪುಕಲ್ಲು ಕಳವು ಮಾಡಿದ ಪ್ರಕರಣದಲ್ಲಿ ಉದಯ ಶೆಟ್ಟಿಯವರೊಂದಿಗೆ ಶೀನ ಪೂಜಾರಿಯವರನ್ನೂ ಎರಡನೇ ಆರೋಪಿಯನ್ನಾಗಿ ಸೇರಿಸಲಾಗಿತ್ತು. ಕಲ್ಲುಕೋರೆ ವ್ಯವಹಾರದ ಬಗ್ಗೆ ಯಾವುದೇ ಸಂಬಂಧವಿಲ್ಲದ ತಾವು ಆರೋಪಿಯಾಗಿರುವುದನ್ನು ಪ್ರಶ್ನಿಸಿದರೂ, ಪ್ರಕರಣವನ್ನು ಬೇಗ ಮುಗಿಸಿಕೊಳ್ಳಲು ತಪ್ಪೊಪ್ಪಿಕೊಳ್ಳುವಂತೆ ಸಲಹೆ ನೀಡಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.

ತಾವು ಮಾಡದ ತಪ್ಪನ್ನು ಒಪ್ಪಿಕೊಳ್ಳಲು ನಿರಾಕರಿಸಿದ ಶೀನ ಪೂಜಾರಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಸಂಪರ್ಕಿಸಿದರು. ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಪ್ರತಿಷ್ಠಾನವು ವಕೀಲ ಎನ್. ವಿವೇಕಾನಂದ ಅವರ ಮೂಲಕ ಕರ್ನಾಟಕ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸಿತು. ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠದ ಮುಂದೆ ವಿಚಾರಣೆ ನಡೆದಿದ್ದು, ಶೀನ ಪೂಜಾರಿಯನ್ನು ಆರೋಪಿಯನ್ನಾಗಿ ಮಾಡಲು ಇರುವ ಆಧಾರಗಳ ಕುರಿತು ನ್ಯಾಯಾಲಯ ಗಂಗೊಳ್ಳಿ ಠಾಣೆಯಿಂದ ಸ್ಪಷ್ಟನೆ ಕೋರಿತ್ತು ಎನ್ನಲಾಗಿದೆ. ನಾಲ್ಕು ಅವಕಾಶ ನೀಡಿದರೂ ಸೂಕ್ತ ಉತ್ತರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ 2026ರ ಆಗಸ್ಟ್ 6ರಂದು ಹೈಕೋರ್ಟ್ ಶೀನ ಪೂಜಾರಿಯವರ ಹೆಸರನ್ನು ದೋಷಾರೋಪಣ ಪಟ್ಟಿಯಿಂದ ಕೈಬಿಟ್ಟು, ಅವರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿತು.

ಒಂದೂವರೆ ವರ್ಷಗಳ ಕಾಲ ಆರೋಪಿಯೆಂಬ ಹಣೆಪಟ್ಟಿಯೊಂದಿಗೆ ಮಾನಸಿಕ ಯಾತನೆ ಹಾಗೂ ಸಾಮಾಜಿಕ ಅವಮಾನ ಅನುಭವಿಸಿದ ಶೀನ ಪೂಜಾರಿ, ತನಗಾದ ಅನ್ಯಾಯ ಇನ್ಯಾರಿಗೂ ಆಗಬಾರದು ಎಂದು ಹೇಳಿದ್ದಾರೆ. ಸಂಬಂಧಪಟ್ಟವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದು, ಅಗತ್ಯವಿದ್ದಲ್ಲಿ ಪ್ರತಿಷ್ಠಾನದಿಂದ ಸಂಪೂರ್ಣ ಕಾನೂನು ನೆರವು ನೀಡುವುದಾಗಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ರವೀಂದ್ರನಾಥ ಶಾನುಭಾಗ್ ತಿಳಿಸಿದ್ದಾರೆ. ಯಾವುದೇ ದಾಖಲೆ ಅಥವಾ ಹೇಳಿಕೆಗೆ ಸಹಿ ಮಾಡುವ ಮುನ್ನ ಅದರ ಸಂಪೂರ್ಣ ವಿವರವನ್ನು ತಿಳಿದುಕೊಂಡು, ಅಗತ್ಯವಿದ್ದರೆ ಕಾನೂನು ಸಲಹೆ ಪಡೆದು ಸಹಿ ಮಾಡಬೇಕು ಎಂಬ ಎಚ್ಚರಿಕೆಯ ಸಂದೇಶವನ್ನೂ ಈ ಪ್ರಕರಣ ನೀಡಿದೆ.


