ಉಡುಪಿ: ಬಡಗುತಿಟ್ಟಿನ ಯಕ್ಷಗಾನ ಕ್ಷೇತ್ರದ ಹಿರಿಯ ಸ್ತ್ರೀವೇಷಧಾರಿ ಚಂದ್ರಶೇಖರ ಶೆಟ್ಟಿ (59) ಅವರು ಅ. 19, 2026ರಂದು ನಿಧನರಾದರು. ಅವರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

14ನೇ ವಯಸ್ಸಿನಲ್ಲಿಯೇ ಯಕ್ಷಗಾನ ಕ್ಷೇತ್ರ ಪ್ರವೇಶಿಸಿದ್ದ ಅವರು, ನಾಲ್ಕು ದಶಕಗಳ ಕಾಲ ಕಲಾಸೇವೆ ಸಲ್ಲಿಸಿದ್ದರು. ಕಳವಾಡಿ, ನಾಗರಕೋಡಿ, ಸಾಲಿಗ್ರಾಮ, ಗೋಳಿಗರಡಿ, ಹಾಲಾಡಿ, ಮಂದಾರ್ತಿ ಹಾಗೂ ಮಾರಣಕಟ್ಟೆ ಮೇಳಗಳಲ್ಲಿ ತಿರುಗಾಟ ನಡೆಸಿದ್ದರು.

ವಿವಿಧ ಪೌರಾಣಿಕ ಸ್ತ್ರೀಪಾತ್ರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಮೂಲಕ ಕಲಾರಸಿಕರ ಪ್ರೀತಿ, ಅಭಿಮಾನ ಗಳಿಸಿದ್ದರು. ಅವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಳಿ ಕಡೆಕಾರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


