ಉಡುಪಿ: ರಾಜಕೀಯವು ಉಚಿತ ಕೊಡುಗೆಗಳನ್ನು ಘೋಷಿಸಿ ಮತ ಪಡೆಯುವುದಕ್ಕೆ ಸೀಮಿತವಾಗದೆ, ಜವಾಬ್ದಾರಿಯುತ ಆಡಳಿತ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುವಂತಾಗಬೇಕು ಎಂದು ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಅಣ್ಣಾಮಲೈ ಹೇಳಿದರು. ಉಡುಪಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಜಕೀಯವು ಕೇವಲ ಪೋಸ್ಟರ್ ಸಂಸ್ಕೃತಿಗೆ ಸೀಮಿತವಾಗಬಾರದು. ಮುಖ್ಯಮಂತ್ರಿ ಅಥವಾ ಮಾಜಿ ಮುಖ್ಯಮಂತ್ರಿ ಭೇಟಿ ನೀಡಿದಾಗ ಅವರ ಪೋಸ್ಟರ್ಗಳನ್ನು ಹಾಕುವುದಕ್ಕಿಂತ, ಸರ್ಕಾರ ಉಡುಪಿಗೆ ಏನು ಮಾಡಿದೆ, ಕಲ್ಸಂಕಕ್ಕೆ ಯಾವ ಕೊಡುಗೆ ನೀಡಿದೆ ಎಂಬುದನ್ನು ಜನರಿಗೆ ತಿಳಿಸುವ ಪೋಸ್ಟರ್ಗಳನ್ನು ಹಾಕುವ ಮಟ್ಟಕ್ಕೆ ರಾಜಕೀಯ ಬೆಳೆಯಬೇಕು ಎಂದರು.

ರಾಜಕೀಯ ಪಕ್ಷಗಳ ನಡುವೆ ಅಭಿವೃದ್ಧಿ ಕಾರ್ಯಗಳ ಆಧಾರದಲ್ಲಿ ಸ್ಪರ್ಧೆ ನಡೆಯಬೇಕು. ಸರ್ಕಾರದ ಸಾಧನೆಗಳೇ ರಾಜಕೀಯ ಸ್ಪರ್ಧೆಯ ಮಾನದಂಡವಾಗಬೇಕು. ಇಂತಹ ಜವಾಬ್ದಾರಿಯುತ ಮತ್ತು ಸ್ಪರ್ಧಾತ್ಮಕ ರಾಜಕೀಯ ವ್ಯವಸ್ಥೆ ರೂಪುಗೊಂಡಾಗ ಮಾತ್ರ ಆಡಳಿತದಲ್ಲಿ ಸುಧಾರಣೆ ತರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಕರ್ನಾಟಕದಲ್ಲಿ ರಾಜಕೀಯವು ಇನ್ನಷ್ಟು ಜವಾಬ್ದಾರಿಯುತವಾಗಬೇಕಿದೆ. ಉಚಿತ ಕೊಡುಗೆಗಳನ್ನು ಘೋಷಿಸಿ ಮತ ಪಡೆಯುವ ರಾಜಕಾರಣಕ್ಕೆ ಸೀಮಿತವಾಗದೆ, ಜನರಿಗೆ ಉತ್ತಮ ಆಡಳಿತ ಒದಗಿಸುವತ್ತ ರಾಜಕೀಯ ಪಕ್ಷಗಳು ಗಮನಹರಿಸಬೇಕು. ರಾಜ್ಯದ ಅಭಿವೃದ್ಧಿ ಹಾಗೂ ಜನರ ಜೀವನಮಟ್ಟ ಸುಧಾರಣೆ ಆಡಳಿತದ ಪ್ರಮುಖ ಗುರಿಯಾಗಬೇಕು ಎಂದು ಹೇಳಿದರು.

ಕರ್ನಾಟಕವು ಇನ್ನಷ್ಟು ಉತ್ತಮ ಆಡಳಿತವನ್ನು ನಿರೀಕ್ಷಿಸುವ ಅರ್ಹತೆಯನ್ನು ಹೊಂದಿದೆ. ಬೆಂಗಳೂರು ಮಾತ್ರ ಅಭಿವೃದ್ಧಿಯಾದರೆ ಸಾಲದು. ರಾಜ್ಯದ ಒಟ್ಟಾರೆ ಜಿಡಿಪಿಗೆ ಬೆಂಗಳೂರಿನ ಕೊಡುಗೆ ಶೇ. 65ರಷ್ಟಿದೆ ಎಂಬ ಹಿನ್ನೆಲೆಯಲ್ಲಿ, ಅಭಿವೃದ್ಧಿಯು ರಾಜ್ಯದ ಇತರ ಜಿಲ್ಲೆಗಳಿಗೂ ಸಮಾನವಾಗಿ ತಲುಪಬೇಕು ಎಂದು ಅಣ್ಣಾಮಲೈ ಹೇಳಿದರು. ವಿಜಯಪುರ, ಕಲಬುರಗಿ, ಗದಗ, ಉಡುಪಿ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಅಭಿವೃದ್ಧಿಗೆ ಸಮಾನ ಅವಕಾಶಗಳು ದೊರೆಯಬೇಕು. ಉದ್ಯೋಗ, ಮೂಲಸೌಕರ್ಯ ಹಾಗೂ ಆರ್ಥಿಕ ಬೆಳವಣಿಗೆ ಕೆಲವು ನಗರಗಳಿಗೆ ಮಾತ್ರ ಸೀಮಿತವಾಗಬಾರದು. ಕರ್ನಾಟಕವು ಬೆಂಗಳೂರು ಅವಲಂಬಿತ ರಾಜ್ಯವಾಗದೆ, ಎಲ್ಲ ಜಿಲ್ಲೆಗಳ ಸಾಮರ್ಥ್ಯವನ್ನು ಬಳಸಿಕೊಂಡು ಸಮಗ್ರವಾಗಿ ಅಭಿವೃದ್ಧಿ ಹೊಂದಬೇಕು ಎಂದರು.


