ಉಡುಪಿ: ಕೃಷ್ಣನಗರಿ ಉಡುಪಿ ಶನಿವಾರ ಶ್ರೀಕೃಷ್ಣನ ಲೀಲೋತ್ಸವದ ಸಂಭ್ರಮದಲ್ಲಿ ಮಿಂದೆದ್ದಿತು. ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ನಡೆದ ವಿಟ್ಲಪಿಂಡಿ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರೆ, ಸಾವಿರಾರು ಮಂದಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ರಥಬೀದಿಯುದ್ದಕ್ಕೂ ಕಂಡುಬಂದ ವೈವಿಧ್ಯಮಯ ವೇಷಧಾರಿಗಳು ಉತ್ಸವದ ಸಡಗರವನ್ನು ಮತ್ತಷ್ಟು ಹೆಚ್ಚಿಸಿದರು.

ಉಡುಪಿಯ ಶ್ರೀಕೃಷ್ಣ ಮಠದ ವಿಶೇಷ ಆಚರಣೆಗಳಲ್ಲಿ ಒಂದಾಗಿರುವ ವಿಟ್ಲಪಿಂಡಿ ಉತ್ಸವವು ಭಗವಾನ್ ಶ್ರೀಕೃಷ್ಣ ಅವತರಿಸಿದ ಕ್ಷಣದ ಸಂಭ್ರಮವನ್ನು ಮುಂದುವರಿಸುವ ವಿಶಿಷ್ಟ ಲೀಲೋತ್ಸವವಾಗಿದೆ. ಶುಕ್ರವಾರ ಮಧ್ಯರಾತ್ರಿ ಕೃಷ್ಣಾರ್ಘ್ಯ ಸಮರ್ಪಿಸಿ ಶ್ರೀಕೃಷ್ಣನನ್ನು ಭಕ್ತಿಯಿಂದ ಬರಮಾಡಿಕೊಳ್ಳಲಾಗಿತ್ತು. ಬಳಿಕ ವಿಶೇಷ ಪೂಜೆ ನೆರವೇರಿಸಿ ಬಗೆಬಗೆಯ ಭಕ್ಷ್ಯಗಳನ್ನು ನೈವೇದ್ಯವಾಗಿ ಅರ್ಪಿಸಲಾಯಿತು. ಶನಿವಾರ ಬೆಳಗ್ಗಿನಿಂದಲೇ ಶ್ರೀಕೃಷ್ಣ ಮಠದತ್ತ ಭಕ್ತರ ದಂಡೇ ಹರಿದುಬಂತು. ಶ್ರಾವಣ ಶನಿವಾರ ಹಾಗೂ ವಿಟ್ಲಪಿಂಡಿ ಉತ್ಸವದ ಹಿನ್ನೆಲೆಯಲ್ಲಿ ನಾಡಿನ ವಿವಿಧೆಡೆಯಿಂದ ಆಗಮಿಸಿದ 50 ಸಾವಿರಕ್ಕೂ ಅಧಿಕ ಭಕ್ತರು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಮಠದ ವತಿಯಿಂದ ಭಕ್ತರಿಗೆ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಚಿನ್ನದ ರಥದಲ್ಲಿ ಕೃಷ್ಣನ ಮಣ್ಣಿನ ವಿಗ್ರಹ
ಉಡುಪಿಯ ವಿಟ್ಲಪಿಂಡಿ ಉತ್ಸವದ ಪ್ರಮುಖ ವೈಶಿಷ್ಟ್ಯವೆಂದರೆ ಸಾಂಪ್ರದಾಯಿಕ ಮೊಸರು ಕುಡಿಕೆ. ಶ್ರೀಕೃಷ್ಣ ಮೂಲವಿಗ್ರಹವು ಯೋಗನಿದ್ರೆಯಲ್ಲಿರುವ ಕಾರಣ ಉತ್ಸವ ಮೂರ್ತಿಯನ್ನು ಹೊರಗೆ ತರಲಾಗುವುದಿಲ್ಲ. ಬದಲಾಗಿ ವಿಟ್ಲಪಿಂಡಿಗಾಗಿ ವಿಶೇಷವಾಗಿ ತಯಾರಿಸಲಾದ ಶ್ರೀಕೃಷ್ಣನ ಮೃಣ್ಮಯ ವಿಗ್ರಹವನ್ನು ಚಿನ್ನದ ರಥದಲ್ಲಿರಿಸಿ ರಥಬೀದಿಯಲ್ಲಿ ಮೆರವಣಿಗೆ ಮಾಡುವುದು ಇಲ್ಲಿನ ವಿಶಿಷ್ಟ ಸಂಪ್ರದಾಯ.ಚಿನ್ನದ ರಥದಲ್ಲಿ ವಿರಾಜಮಾನನಾದ ಮಣ್ಣಿನ ಕೃಷ್ಣನ ಮೆರವಣಿಗೆ ಸಾಗುತ್ತಿದ್ದಂತೆ, ಸಾಂಪ್ರದಾಯಿಕ ವೇಷಧಾರಿ ಗೊಲ್ಲರು ಮೊಸರಿನ ಕುಡಿಕೆಗಳನ್ನು ಒಡೆಯುತ್ತಾ ಸಂಭ್ರಮಿಸಿದರು. ತಾಸೆ–ವಾದ್ಯಗಳ ಸದ್ದು, ಭಕ್ತರ ಜೈಕಾರ ಹಾಗೂ ಮೊಸರು ಕುಡಿಕೆಯ ಉತ್ಸಾಹದ ನಡುವೆ ರಥಬೀದಿ ಸಂಪೂರ್ಣ ಹಬ್ಬದ ವಾತಾವರಣದಲ್ಲಿ ಕಂಗೊಳಿಸಿತು.

ವೇಷಧಾರಿಗಳ ಕಲರವ
ವಿಟ್ಲಪಿಂಡಿ ಉತ್ಸವದ ಮತ್ತೊಂದು ಪ್ರಮುಖ ಆಕರ್ಷಣೆಯೇ ವಿವಿಧ ಬಗೆಯ ವೇಷಧಾರಿಗಳು. ಹುಲಿವೇಷ ಸೇರಿದಂತೆ ಹಲವು ವಿಶಿಷ್ಟ ವೇಷಗಳಲ್ಲಿ ಕಲಾವಿದರು ರಥಬೀದಿಯಲ್ಲಿ ಸಂಚರಿಸಿ ಜನರನ್ನು ರಂಜಿಸಿದರು. ಬಣ್ಣಬಣ್ಣದ ವೇಷಗಳು, ವಿಶಿಷ್ಟ ಮುಖವರ್ಣಿಕೆ ಹಾಗೂ ಕಲಾವಿದರ ಅಭಿನಯ ಉತ್ಸವಕ್ಕೆ ಜನಪದ ಸೊಬಗನ್ನು ನೀಡಿತು. ಈ ಬಾರಿ ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ವಿಜಯ್ ಅವರ ಹೋಲಿಕೆಯ ವೇಷದಲ್ಲಿ ಕಾಣಿಸಿಕೊಂಡ ಸ್ಥಳೀಯ ವ್ಯಕ್ತಿಯೊಬ್ಬರು ಕೂಡ ವಿಶೇಷ ಗಮನ ಸೆಳೆದರು.

ಶ್ರೀಗಳ ವಿಶೇಷ ಪೂಜೆ
ಪರ್ಯಾಯ ಶಿರೂರು ಮಠದ ಶ್ರೀ ವೇದವರ್ಧನತೀರ್ಥ ಸ್ವಾಮೀಜಿ ಅವರು ಶ್ರೀಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತರನ್ನು ಹರಸಿದರು. ಉಡುಪಿಯ ಅಷ್ಟಮಿ ಸಂಭ್ರಮಕ್ಕೆ ತನ್ನದೇ ಆದ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯವಿದ್ದು, ಕಳೆದ ಎರಡು ದಿನಗಳಿಂದಲೂ ಇಡೀ ಕೃಷ್ಣನಗರಿ ಕೃಷ್ಣನಾಮ, ಭಕ್ತಿ, ಜನಪದ ಕಲೆ ಮತ್ತು ಉತ್ಸವದ ಸಡಗರದಲ್ಲಿ ಮಿಂದೇಳುತ್ತಿದೆ. ಕೃಷ್ಣಾರ್ಘ್ಯದ ಭಕ್ತಿಭಾವದಿಂದ ಆರಂಭಗೊಂಡ ಜನ್ಮಾಷ್ಟಮಿ ಸಂಭ್ರಮವು ವಿಟ್ಲಪಿಂಡಿಯ ವೈಭವದಲ್ಲಿ ಪರಾಕಾಷ್ಠೆ ತಲುಪಿದ್ದು, ಭಕ್ತಿ–ಸಂಪ್ರದಾಯ–ಜನಪದ ಕಲೆಯ ಅಪೂರ್ವ ಸಂಗಮಕ್ಕೆ ಉಡುಪಿ ಸಾಕ್ಷಿಯಾಯಿತು.


