Thursday, October 29, 2026

spot_img

ಕಾಪು ಯಾರ್ಡ್ ಬೀಚ್‌ನಲ್ಲಿ ಗಾಂಜಾ ಮಾರಾಟ: ಇಬ್ಬರ ಬಂಧನ

ಉಡುಪಿ: ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಕಾಪು ಮತ್ತು ಮಟ್ಟು ಬೀಚ್‌ಗಳ ಪರಿಸರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಕಾಪು ಪೊಲೀಸರು ಬಂಧಿಸಿದ್ದು, 5.710 ಕೆ.ಜಿ. ಗಾಂಜಾ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಕಾಪು ತಾಲೂಕಿನ ಬೆಳಪು ಗ್ರಾಮದ ವಿನಯನಗರ ನಿವಾಸಿ ಆರೀಫ್ (38) ಹಾಗೂ ಉಡುಪಿ ತಾಲೂಕಿನ ಪಡುತೋನ್ಸೆ ಗ್ರಾಮದ ಹೂಡೆ ನಿವಾಸಿ ಅಕೀಫ್ (34) ಎಂದು ಗುರುತಿಸಲಾಗಿದೆ. ವಶಪಡಿಸಿಕೊಂಡ ಗಾಂಜಾದ ಮೌಲ್ಯ ಸುಮಾರು 2.85 ಲಕ್ಷ ರೂ. ಎಂದು ಪೊಲೀಸರು ತಿಳಿಸಿದ್ದಾರೆ.

ಅ.27ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಕಾಪು ಪೊಲೀಸ್ ವೃತ್ತ ನಿರೀಕ್ಷಕ ಅಜ್ಮತ್ ಆಲಿ ಅವರಿಗೆ ದೊರೆತ ಖಚಿತ ಮಾಹಿತಿಯಂತೆ, ಉಳಿಯಾರಗೋಳಿ ಗ್ರಾಮದ ಯಾರ್ಡ್ ಬೀಚ್ ಬಳಿ ಗಾಂಜಾ ಮಾರಾಟ ನಡೆಯುತ್ತಿರುವ ಶಂಕೆಯ ಮೇರೆಗೆ ಕಾರ್ಯಾಚರಣೆ ನಡೆಸಲಾಯಿತು. ಕಾಪು ಠಾಣೆಯ ಪೊಲೀಸ್ ಉಪನಿರೀಕ್ಷಕ ತೇಜಸ್ವಿ ಅವರ ನೇತೃತ್ವದ ತಂಡ ಮಧ್ಯಾಹ್ನ 12.05ರ ಸುಮಾರಿಗೆ ಸ್ಥಳಕ್ಕೆ ದಾಳಿ ನಡೆಸಿತು. ಈ ವೇಳೆ ಆರೋಪಿಗಳು ತಮ್ಮ ಸ್ವಂತ ಲಾಭಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ ಗಾಂಜಾವನ್ನು ಹೊಂದಿರುವುದು ಪತ್ತೆಯಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಕಾರ್ಯಾಚರಣೆಯಲ್ಲಿ 5.710 ಕೆ.ಜಿ. ಗಾಂಜಾ, 225 ರೂ. ನಗದು ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಳಿಕ ಇಬ್ಬರು ಆರೋಪಿಗಳನ್ನು ಬಂಧಿಸಲಾಯಿತು. ಆರೋಪಿಗಳು ಆಂಧ್ರಪ್ರದೇಶದ ಹೈದರಾಬಾದ್‌ನಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದುದಾಗಿ ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳ ವಿರುದ್ಧ ಈಗಾಗಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಪ್ರಕಟಣೆ ತಿಳಿಸಿದೆ. ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಈಶಿತಾ ಗುಪ್ತಾ ಹಾಗೂ ಕಾಪು ವೃತ್ತ ನಿರೀಕ್ಷಕ ಅಜ್ಮತ್ ಆಲಿ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು. ಕಾಪು ಠಾಣೆಯ ಪಿಎಸ್‌ಐ ತೇಜಸ್ವಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಕಾರ್ಕಳ ಉಪವಿಭಾಗದ ಆಂಟಿ ಎನ್‌ಡಿಪಿಎಸ್ ಸ್ಕ್ವಾಡ್, ಸಿಡಿಆರ್ ತಾಂತ್ರಿಕ ವಿಭಾಗದ ಸಿಬ್ಬಂದಿ ಮತ್ತು ಸೊಕೊ ಅಧಿಕಾರಿಗಳು ಕಾರ್ಯಾಚರಣೆಗೆ ಸಹಕರಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles