ಉಡುಪಿ: ಬ್ರಹ್ಮಾವರದ ಭದ್ರಗಿರಿ ಜಂಕ್ಷನ್ನಲ್ಲಿ ರೌಡಿಶೀಟರ್ ಸುಜಿತ್ ಪಿಂಟೋ (43) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಪ್ರವೀಣ್ ಪೂಜಾರಿ ಮತ್ತು ಪ್ರಮೋದ್ ಪೂಜಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಲ್ವರು ವ್ಯಕ್ತಿಗಳ ನಡುವೆ ನಡೆದ ಹೊಡೆದಾಟ ಕೊಲೆಯಲ್ಲಿ ಅಂತ್ಯಗೊಂಡಿದ್ದು, ವೈಯಕ್ತಿಕ ಹಾಗೂ ಹಣಕಾಸಿನ ವಿಚಾರವೇ ಕೃತ್ಯಕ್ಕೆ ಕಾರಣವಾಗಿರುವ ಶಂಕೆ ಇದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಭದ್ರಗಿರಿ ಜಂಕ್ಷನ್ನಲ್ಲಿ ನಡೆದ ಹೊಡೆದಾಟದ ವೇಳೆ ಸುಜಿತ್ ಪಿಂಟೋ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಲಾಗಿದೆ. ಗಂಭೀರವಾಗಿ ಗಾಯಗೊಂಡ ಸುಜಿತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ವೇಳೆ ಸುಜಿತ್ ರಕ್ಷಣೆಗೆ ಧಾವಿಸಿದ ಜೀವನ್ ಪೂಜಾರಿ ಮೇಲೂ ಹಲ್ಲೆ ನಡೆದಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.

ಪೊಲೀಸ್ ವಶದಲ್ಲಿರುವ ಪ್ರವೀಣ್ ಪೂಜಾರಿ ರಿಕ್ಷಾ ಚಾಲಕನಾಗಿದ್ದು, ಪ್ರಮೋದ್ ಪೂಜಾರಿ ಕೂಲಿ ಕಾರ್ಮಿಕನಾಗಿದ್ದಾನೆ. ಇಬ್ಬರಿಗೂ ಈ ಹಿಂದೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ ಎಂದು ಎಸ್ಪಿ ತಿಳಿಸಿದ್ದಾರೆ.

ಕೊಲೆಯಾದ ಸುಜಿತ್ ಪಿಂಟೋ ರೌಡಿಶೀಟರ್ ಆಗಿದ್ದು, ಅವರ ವಿರುದ್ಧ ಒಟ್ಟು ಆರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಹಿರಿಯಡ್ಕ, ಮಣಿಪಾಲ ಹಾಗೂ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣಗಳಲ್ಲಿಯೂ ಅವರು ಭಾಗಿಯಾಗಿದ್ದ ಆರೋಪವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮೇಲ್ನೋಟಕ್ಕೆ ಹಣಕಾಸಿನ ವಿಚಾರವೇ ಕೊಲೆಗೆ ಕಾರಣವಾಗಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಪ್ರಕರಣದ ಹಿಂದಿನ ನೈಜ ಕಾರಣವನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸುಜಿತ್ ವಿರುದ್ಧ ಈ ಹಿಂದೆ ದಾಖಲಾಗಿದ್ದ ಮೂರು ಕೊಲೆ ಪ್ರಕರಣಗಳ ಹಿನ್ನೆಲೆಯಲ್ಲಿಯೂ ತನಿಖೆ ನಡೆಸಲಾಗುತ್ತಿದೆ. ಹಿಂದಿನ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದ ಆರೋಪಿಗಳನ್ನು ಬಳಸಿಕೊಂಡು ಪ್ರಸ್ತುತ ಕೃತ್ಯ ಎಸಗಲಾಗಿದೆಯೇ ಎಂಬ ಆಯಾಮದಲ್ಲಿಯೂ ಪರಿಶೀಲನೆ ನಡೆಯುತ್ತಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.


