ಉಡುಪಿ : ತುರ್ತು ಹಾಗೂ ಸಂಕಷ್ಟದ ಸಂದರ್ಭಗಳಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮತ್ತು ಇತರರಿಗೆ ನೆರವಾಗಲು ಪ್ರಥಮ ಚಿಕಿತ್ಸೆಯ ಅರಿವು ಸಹಕಾರಿಯಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಪ್ರಥಮ ಚಿಕಿತ್ಸೆಯ ಮೂಲಭೂತ ಜ್ಞಾನವನ್ನು ಹೊಂದಿರುವುದು ಅಗತ್ಯ ಎಂದು ಜಿಲ್ಲಾ ರೆಡ್ಕ್ರಾಸ್ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ಹೇಳಿದರು.

ಉಡುಪಿಯ ವಿದ್ಯಾರತ್ನ ನರ್ಸಿಂಗ್ ಕಾಲೇಜಿನಲ್ಲಿ ಜಿಲ್ಲಾ ರೆಡ್ಕ್ರಾಸ್ ಸಂಸ್ಥೆ ಹಾಗೂ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ಒಂದು ದಿನದ ಪ್ರಥಮ ಚಿಕಿತ್ಸೆ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲೆ ಅನಿತಾ ಸಿ. ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ. ಎ.ವಿ. ಬಾಳಿಗಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಕಾವ್ಯ ಹಾಗೂ ಖ್ಯಾತ ಮೂಳೆ ತಜ್ಞ ಡಾ. ಸುರೇಶ್ ಶೆಣೈ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಪ್ರಥಮ ಚಿಕಿತ್ಸೆಯ ಕುರಿತು ಮಾಹಿತಿ ನೀಡಿದರು.

ನರ್ಸಿಂಗ್ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕಿ ಪ್ರೀತಿ ಫೆರ್ನಾಂಡಿಸ್ ಸ್ವಾಗತಿಸಿದರು. ಮೆರಿಟಾ ಮೆಂಡೋನ್ಸಾ ವಂದಿಸಿದರು. ಉಪಪ್ರಾಂಶುಪಾಲ ಡಾ. ರಮೇಶ್ ಎಂ. ಕೆ., ಆಡಳಿತಾಧಿಕಾರಿ ಡಾ. ರವಿ ಪಾಲನ್, ಸಿಟಿ ಆಸ್ಪತ್ರೆಯ ನರ್ಸಿಂಗ್ ಸುಪರಿಂಟೆಂಡೆಂಟ್ ಮರಿಯಾ ಆಳ್ವ ಹಾಗೂ ಮಾಲಿನಿ ಮೆರಿಟ್ ಕುಂದರ್ ಉಪಸ್ಥಿತರಿದ್ದರು.


