ಉಡುಪಿ: ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸುವ ಪ್ರಸ್ತಾವನೆಗೆ ಸಹಕಾರ ಕೋರಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಮುಂಬೈನ ಮಂತ್ರಾಲಯದಲ್ಲಿ ಭೇಟಿ ಮಾಡಿದರು.

ಕೊಂಕಣ ರೈಲ್ವೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಭವಿಷ್ಯದ ಪ್ರಯಾಣಿಕರ ಸಂಚಾರದ ಅಗತ್ಯಕ್ಕೆ ಅನುಗುಣವಾಗಿ ಸುಮಾರು 750 ಕಿ.ಮೀ. ಉದ್ದದ ಮಾರ್ಗವನ್ನು ದ್ವಿಪಥಗೊಳಿಸುವುದು ಅನಿವಾರ್ಯವಾಗಿದೆ. ಹಳಿಗಳ ದ್ವಿಗುಣೀಕರಣ ಹಾಗೂ ಹದಗೆಟ್ಟಿರುವ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ಅಂದಾಜು 40,000 ಕೋಟಿ ಅಗತ್ಯವಿದೆ. ಆದರೆ, ಕೊಂಕಣ ರೈಲ್ವೆಯ ಪ್ರಸ್ತುತ ಆರ್ಥಿಕ ಸ್ಥಿತಿಯಲ್ಲಿ ಇಷ್ಟು ದೊಡ್ಡ ಮೊತ್ತವನ್ನು ಭರಿಸುವುದು ಕಷ್ಟಸಾಧ್ಯ ಎಂದು ಕೋಟ ವಿವರಿಸಿದರು. ಕೊಂಕಣ ರೈಲ್ವೆ ಹಾದುಹೋಗುವ ರಾಜ್ಯ ಸರ್ಕಾರಗಳು ತಮ್ಮ ಪಾಲಿನ ಷೇರುಗಳನ್ನು ಬಿಟ್ಟುಕೊಟ್ಟರೆ ವಿಲೀನ ಪ್ರಕ್ರಿಯೆ ಸಾಧ್ಯವಾಗಬಹುದು ಎಂದು ಕೇಂದ್ರ ಸಚಿವರು ಲೋಕಸಭೆಯಲ್ಲಿ ತಿಳಿಸಿದ್ದನ್ನು ಅವರು ಮುಖ್ಯಮಂತ್ರಿಯ ಗಮನಕ್ಕೆ ತಂದರು. ಗೋವಾ ಮತ್ತು ಕೇರಳ ಸರ್ಕಾರಗಳು ವಿಲೀನಕ್ಕೆ ಸಹಮತ ವ್ಯಕ್ತಪಡಿಸಿದ್ದು, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರೈಲ್ವೆ ಅಭಿವೃದ್ಧಿಗೆ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಮಹಾರಾಷ್ಟ್ರ ಸರ್ಕಾರವೂ ವಿಲೀನಕ್ಕೆ ಸಹಮತ ನೀಡಿದರೆ ಕೊಂಕಣ ರೈಲ್ವೆ ಮಾರ್ಗವನ್ನು ದ್ವಿಪಥಗೊಳಿಸುವುದರ ಜತೆಗೆ ಇತರ ಅಭಿವೃದ್ಧಿ ಕಾರ್ಯಗಳಿಗೂ ವೇಗ ದೊರೆಯಲಿದೆ. ಈ ನಿಟ್ಟಿನಲ್ಲಿ ಕರಾವಳಿ ರಾಜ್ಯಗಳ ಜನಪ್ರತಿನಿಧಿಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಸಾಧ್ಯವಾಗಲಿದೆ ಎಂದು ಕೋಟ ಅಭಿಪ್ರಾಯಪಟ್ಟರು. ಪ್ರಸ್ತಾವನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಇದು ಮಹತ್ವದ ವಿಚಾರವಾಗಿದ್ದು, ಕೊಂಕಣ ರೈಲ್ವೆ ಪ್ರಯಾಣಿಕರ ಹಿತದೃಷ್ಟಿಯಿಂದ ಸಹಮತದ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಚಂದಗಡ್ ಶಾಸಕ ಶಿವಾಜಿ ಪಾಟೀಲ್, ನವಿ ಮುಂಬೈ ಮಹಾನಗರ ಪಾಲಿಕೆ ಸದಸ್ಯ ಸಂತೋಷ್ ಶೆಟ್ಟಿ, ಕುಂದಾಪುರ ರೈಲ್ವೆ ಬಳಕೆದಾರರ ಸಂಘದ ಗೌತಮ್ ಶೆಟ್ಟಿ ಹಾಗೂ ಸುನಿಲ್ ಪೂಜಾರಿ ಉಪಸ್ಥಿತರಿದ್ದರು.


