ಉಡುಪಿ : ರಾಜ್ಯದ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ 10 ಪೊಲೀಸ್ ಠಾಣೆಗಳ ಪೈಕಿ ಬೈಂದೂರು ಕ್ಷೇತ್ರದ ಗಂಗೊಳ್ಳಿ ಪೊಲೀಸ್ ಠಾಣೆ 7ನೇ ಸ್ಥಾನ ಪಡೆದಿರುವ ಹಿನ್ನೆಲೆಯಲ್ಲಿ ಶಾಸಕ ಗುರುರಾಜ್ ಶೆಟ್ಟಿ ಅವರು ಠಾಣಾಧಿಕಾರಿ ಹಾಗೂ ಸಿಬ್ಬಂದಿಯನ್ನು ಅಭಿನಂದಿಸಿದರು.

ಅಪರಾಧ ಪತ್ತೆ, ಸಾರ್ವಜನಿಕರೊಂದಿಗಿನ ಸಂಪರ್ಕ, ಜನಸ್ನೇಹಿ ಪೊಲೀಸ್ ಕಾರ್ಯವೈಖರಿ ಹಾಗೂ ಮಾದಕ ದ್ರವ್ಯ ತಡೆ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ಸೇರಿದಂತೆ ವಿವಿಧ ಮಾನದಂಡಗಳಲ್ಲಿ ಗಂಗೊಳ್ಳಿ ಠಾಣೆ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವುದು ಸಂತಸದ ವಿಚಾರ ಎಂದು ಶಾಸಕರು ಹೇಳಿದರು.

ಈ ಸಾಧನೆಗೆ ಶ್ರಮಿಸಿದ ಪ್ರಸ್ತುತ ಹಾಗೂ ಹಿಂದಿನ ಠಾಣಾಧಿಕಾರಿಗಳು ಸೇರಿದಂತೆ ಎಲ್ಲ ಸಿಬ್ಬಂದಿಗೂ ಅಭಿನಂದನೆ ಸಲ್ಲಿಸಿದ ಅವರು, ಗಂಗೊಳ್ಳಿ ಠಾಣೆಯ ಕಾರ್ಯವೈಖರಿ ಕ್ಷೇತ್ರದ ಹಾಗೂ ಜಿಲ್ಲೆಯ ಇತರ ಪೊಲೀಸ್ ಠಾಣೆಗಳಿಗೂ ಮಾದರಿಯಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ., ಪ್ರಧಾನ ಕಾರ್ಯದರ್ಶಿ ಗೋಪಾಲ ಪೂಜಾರಿ ವಸ್ರೆ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಸುರೇಶ್ ಬಟವಾಡಿ, ತ್ರಾಸಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಿಥುನ್ ತ್ರಾಸಿ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ರಾಜೇಶ್ ನಾವುಂದ ಮತ್ತು ಜಯಂತ್ ಗಂಗೊಳ್ಳಿ, ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಮಂಕಿ, ಸ್ಥಳೀಯ ಮುಖಂಡ ರವಿ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.



