ಉಡುಪಿ: ಮುದೂರು ಗ್ರಾಮದ ಉದಯನಗರದಲ್ಲಿ ಕೊರಗ ಸಮುದಾಯದವರೊಂದಿಗೆ ಸಂವಾದ ನಡೆಸಿದ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಅವರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿದರು.

ಉದಯನಗರದ ಶಶಿಧರ ಕೊರಗ ಅವರ ಮನೆಯಲ್ಲಿ ನಡೆದ ಸಂವಾದದಲ್ಲಿ ಸ್ಥಳೀಯ ಕೊರಗ ಸಮುದಾಯದ ಬಂಧುಗಳೊಂದಿಗೆ ಮಾತುಕತೆ ನಡೆಸಿ, ಅವರ ದೈನಂದಿನ ಜೀವನ ಹಾಗೂ ವಿವಿಧ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು.

ಆ ಭಾಗದ ಸುಮಾರು 60 ಮನೆಗಳಿಗೆ ಹಕ್ಕುಪತ್ರ ದೊರೆಯದಿರುವುದು, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಬಾರದಿರುವುದು ಹಾಗೂ ಪಡಿತರ ಚೀಟಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸಮುದಾಯದವರು ಶಾಸಕರ ಗಮನಕ್ಕೆ ತಂದರು. ಈ ಬಗ್ಗೆ ತಕ್ಷಣ ಅಧಿಕಾರಿಗಳನ್ನು ಸಂಪರ್ಕಿಸಿದ ಶಾಸಕರು, ಸಮಸ್ಯೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ., ಪ್ರಧಾನ ಕಾರ್ಯದರ್ಶಿ ಗೋಪಾಲ ಪೂಜಾರಿ, ಪರಿಶಿಷ್ಟ ಪಂಗಡ ಮೋರ್ಚಾ ಅಧ್ಯಕ್ಷ ನಕ್ಷತ್ರ ನಾಯ್ಕ, ಅಡ್ಕಿಕೋಡ್ಲು ಉದಯ ಶೆಟ್ಟಿ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.


