Friday, October 2, 2026

spot_img

ಯುವಜನರನ್ನು ವ್ಯಸನಮುಕ್ತಗೊಳಿಸುವುದೇ ನಿಜವಾದ ಗಾಂಧಿ ಜಯಂತಿ

ಉಡುಪಿ: ಯುವ ಪೀಳಿಗೆಯನ್ನು ಮಾದಕ ವ್ಯಸನದಿಂದ ಮುಕ್ತಗೊಳಿಸಿ, ಸ್ವಚ್ಛ ಹಾಗೂ ಸಂಯಮದ ಬದುಕಿನತ್ತ ಕೊಂಡೊಯ್ಯುವುದೇ ನಿಜವಾದ ಗಾಂಧಿ ಜಯಂತಿ ಆಚರಣೆ ಎಂದು ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಂದಾಪುರ ಮತ್ತು ಬೈಂದೂರು ಘಟಕಗಳು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಹಾಗೂ ಕುಂದಾಪುರ ಮತ್ತು ಬೈಂದೂರು ತಾಲೂಕು ಜನಜಾಗೃತಿ ವೇದಿಕೆಗಳ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಆಯೋಜಿಸಿದ್ದ ದುಶ್ಚಟಮುಕ್ತ ಸಮಾಜ ನಿರ್ಮಾಣದ ಜನಜಾಗೃತಿ ಜಾಥಾ ಹಾಗೂ ಗಾಂಧಿ ಸ್ಮೃತಿ ಸಭೆಯಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮಕ್ಕೂ ಮುನ್ನ ಕುಂದಾಪುರದ ಶಾಸ್ತ್ರಿ ವೃತ್ತದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕುಂದಾಪುರ ತಾಲೂಕು ಅಧ್ಯಕ್ಷ ಡಾ. ಉಮೇಶ್ ಪುತ್ರನ್ ಹಾಗೂ ಕುಂದಾಪುರ ಸಂಚಾರ ಪೊಲೀಸ್ ಠಾಣಾಧಿಕಾರಿ ಸುಧಾ ಪ್ರಭು ಅವರು ಶಾಸ್ತ್ರೀಜಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜಾಥಾಕ್ಕೆ ಚಾಲನೆ ನೀಡಿದರು. ಶಾಸ್ತ್ರಿ ವೃತ್ತದಿಂದ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದವರೆಗೆ ಜಾಥಾ ನಡೆಯಿತು. ಬಳಿಕ ಕಲಾಮಂದಿರದಲ್ಲಿ ಸಭಾ ಕಾರ್ಯಕ್ರಮ ಜರುಗಿತು.

ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಕೊಡ್ಗಿ, ಮಹಾತ್ಮ ಗಾಂಧೀಜಿ ಕಂಡಿದ್ದ ಸ್ವಚ್ಛ ಹಾಗೂ ವ್ಯಸನಮುಕ್ತ ಭಾರತದ ಕನಸನ್ನು ನನಸಾಗಿಸಲು ಇಂತಹ ಜನಜಾಗೃತಿ ಕಾರ್ಯಕ್ರಮಗಳು ಅಗತ್ಯ. ಸ್ವರಾಜ್ಯದಷ್ಟೇ ಸ್ವಚ್ಛತೆ ಮತ್ತು ಸಂಯಮಕ್ಕೂ ಮಹತ್ವ ನೀಡಬೇಕು. ಯುವಜನರು ದುಶ್ಚಟಗಳಿಂದ ದೂರವಿದ್ದು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಸಮಾಜ ಪ್ರೇರೇಪಿಸಬೇಕು ಎಂದು ಹೇಳಿದರು.

ಆಶಯ ಭಾಷಣ ಮಾಡಿದ ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ, ಕುಟುಂಬ ಉಳಿದರೆ ಊರು ಉಳಿಯುತ್ತದೆ; ವ್ಯಸನ ತೊರೆದರೆ ಬದುಕು ಬೆಳಗುತ್ತದೆ. ದುಶ್ಚಟಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ಧರ್ಮಸ್ಥಳದ ಜನಜಾಗೃತಿ ವೇದಿಕೆ ನಿರಂತರವಾಗಿ ಶ್ರಮಿಸುತ್ತಿದೆ. ಪ್ರತಿಯೊಬ್ಬರೂ ಈ ಜಾಗೃತಿ ಕಾರ್ಯದಲ್ಲಿ ಕೈಜೋಡಿಸಬೇಕು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಬೈಂದೂರು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸುಧಾಕರ್ ಆಚಾರ್ಯ, ಗಾಂಧೀಜಿಯವರ ತತ್ವಗಳನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳುವ ಉದ್ದೇಶದಿಂದ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿ, ಮನೆಮನೆಗಳಲ್ಲಿ ಜಾಗೃತಿ ಮೂಡಿದಾಗ ಮಾತ್ರ ಗಾಂಧೀಜಿ ಕಂಡ ಆದರ್ಶ ಸಮಾಜ ನಿರ್ಮಾಣ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಉಮೇಶ್ ಶೆಟ್ಟಿ ಶಾನ್ಕಟ್ಟು, ಸರ್ಕಾರಿ ಪದವಿಪೂರ್ವ ಕಾಲೇಜು ಕುಂದಾಪುರದ ಪ್ರಾಚಾರ್ಯ ಚಂದ್ರಶೇಖರ್, ಕೇಂದ್ರ ಸಮಿತಿ ಕುಂದಾಪುರ ಅಧ್ಯಕ್ಷ ಅಶೋಕ್ ಕೆರೆಕಟ್ಟೆ, ಕೇಂದ್ರ ಸಮಿತಿ ಕುಂದಾಪುರ-2 ಅಧ್ಯಕ್ಷ ಸುಬ್ರಹ್ಮಣ್ಯ ಆಚಾರ್ಯ ಹಾಗೂ ಕೇಂದ್ರ ಸಮಿತಿ ಬೈಂದೂರು ಅಧ್ಯಕ್ಷ ವಾಸು ಮೇಸ್ತ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಸಕರ ಸಮ್ಮುಖದಲ್ಲಿ ಉಮೇಶ್ ಶೆಟ್ಟಿ ಶಾನ್ಕಟ್ಟು ಅವರು ಸುಬ್ರಹ್ಮಣ್ಯ ಶೆಟ್ಟಿ ಅವರನ್ನು ಜನಜಾಗೃತಿ ವೇದಿಕೆಯ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಪ್ರಕ್ರಿಯೆ ನೆರವೇರಿಸಿದರು. ಬೈಂದೂರು ಯೋಜನಾಧಿಕಾರಿ ಸಂಜಯ್ ನಾಯ್ಕ್ ಸ್ವಾಗತಿಸಿದರು. ಕುಂದಾಪುರ ಯೋಜನಾಧಿಕಾರಿ-2 ಸುಧೀರ್ ಹಂಗಳೂರು ವಂದಿಸಿದರು. ಉಮೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles