ಉಡುಪಿ : ಭಟ್ರಕೋಡಿ–ಹಿರೇಬೆಟ್ಟಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಅಂಗವಾಗಿ ಕೈಗೆತ್ತಿಕೊಳ್ಳಲಾಗಿರುವ ಸುತ್ತುಪೌಳಿ ನಿರ್ಮಾಣ ಕಾಮಗಾರಿಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶಿಲಾನ್ಯಾಸ ನೆರವೇರಿಸಲಾಯಿತು.

ಕ್ಷೇತ್ರದ ತಂತ್ರಿವರ್ಯರಾದ ಮಂಗಳೂರಿನ ಡಾ. ಸತ್ಯಕೃಷ್ಣ ಭಟ್ ಅವರ ನೇತೃತ್ವದಲ್ಲಿ ದೇವತಾ ಪ್ರಾರ್ಥನೆ, ಪುಣ್ಯಾಹವಾಚನ, ದ್ವಾದಶ ನಾರಿಕೇಳ ಮಹಾಗಣಪತಿ ಹೋಮ ಸೇರಿದಂತೆ ವಿವಿಧ ವೈದಿಕ ವಿಧಿವಿಧಾನಗಳು ಶ್ರದ್ಧಾಭಕ್ತಿಯಿಂದ ಜರುಗಿದವು. ಧನುರ್ ಲಗ್ನದ ಶುಭ ಮುಹೂರ್ತದಲ್ಲಿ ಸುತ್ತುಪೌಳಿ ಕಾಮಗಾರಿಗೆ ಶಿಲಾ ಮುಹೂರ್ತ ನೆರವೇರಿಸುವ ಮೂಲಕ ನಿರ್ಮಾಣ ಕಾರ್ಯಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು.

ಕಾರ್ಯಕ್ರಮದ ಅಂಗವಾಗಿ ಕಬ್ಯಾಡಿಯ ಭ್ರಮರಾಂಬಿಕಾ ಮಹಿಳಾ ಭಜನಾ ಮಂಡಳಿ ಹಾಗೂ ಪರ್ಕಳದ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಭಜನಾ ಸೇವೆ ನಡೆಯಿತು. ಭಕ್ತಿಗೀತೆಗಳ ಗಾಯನದೊಂದಿಗೆ ದೇವಸ್ಥಾನದ ಪರಿಸರದಲ್ಲಿ ಭಕ್ತಿಮಯ ವಾತಾವರಣ ನಿರ್ಮಾಣವಾಯಿತು.

ಇದೇ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರದ ಯೋಜಿತ ವಿನ್ಯಾಸ ಹಾಗೂ ಭವಿಷ್ಯದಲ್ಲಿ ನಿರ್ಮಾಣಗೊಳ್ಳಲಿರುವ ಕಟ್ಟಡದ ಸ್ವರೂಪವನ್ನು ಪರಿಚಯಿಸುವ ವಾಕ್ಥ್ರೂ ವೀಡಿಯೊವನ್ನು ಡಾ. ಸತ್ಯಕೃಷ್ಣ ಭಟ್ ಅನಾವರಣಗೊಳಿಸಿದರು. ವೀಡಿಯೊದ ಮೂಲಕ ದೇವಸ್ಥಾನದ ಜೀರ್ಣೋದ್ಧಾರದ ಯೋಜನೆ ಹಾಗೂ ನಿರ್ಮಾಣದ ರೂಪುರೇಷೆಗಳ ಪರಿಚಯ ಮಾಡಿಕೊಡಲಾಯಿತು. ಬಳಿಕ ಮಹಾಪೂಜೆ ನೆರವೇರಿತು. ಭಕ್ತಾದಿಗಳಿಗೆ ಅನ್ನಸಂತರ್ಪಣೆಯ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀನಿಧಿ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ವಿ. ನಾಯಕ್, ಖಜಾಂಚಿ ಚಂದ್ರಶೇಖರ ನಾಯಕ್, ಸಮಿತಿಯ ಪ್ರಮುಖರಾದ ಜಯಪ್ರಕಾಶ್ ನಾಯಕ್, ಗುರುದಾಸ್ ಭಂಡಾರಿ, ಸೀತಾರಂ ಭಟ್, ಉಮೇಶ್ ಭಟ್, ದಿನೇಶ್ ಪ್ರಭು, ನಾರಾಯಣ ಪೂಜಾರಿ, ಉಮೇಶ್ ನಾಯಕ್, ವಸಂತರಾಯ ಪ್ರಭು, ಶೈಲೇಶ್, ಅಶೋಕ್ ನಾಯಕ್, ರಾಜೇಶ್ ಭಟ್, ಕಾಳಿದಾಸ ಭಂಡಾರಿ, ಶಂಕರ್ ನಾಯಕ್, ಶ್ರೀಧರ್ ನಾಯ್ಕ್, ಸುರೇಶ್ ನಾಯ್ಕ್, ಲಕ್ಷ್ಮೀಶ್ ಭಟ್, ಸುಧಾಕರ್ ಆಚಾರ್ಯ, ಶಾಮ್ ನಾಯ್ಕ್, ಗಣಪತಿ ಕಾಮತ್, ಕೃಷ್ಣ ನಾಯ್ಕ್, ಶ್ರೀಪತಿ ಭಟ್, ಕೇಶವ ಭಂಡಾರಿ, ಹರೀಶ್ ಶೆಟ್ಟಿ, ಶರತ್ ಹೆಗ್ಡೆ, ಮುರಳಿಧರ್ ಲಾಗ್ವಾಕರ್, ಸುಧಾಕರ್ ಲಾಗ್ವಾಕರ್, ಅಶೋಕ್ ಲಾಗ್ವಾಕರ್, ಮಣಿಕಂಠ ಭಟ್, ಶ್ರೀಧರ್ ಭಟ್, ಬಾಲಕೃಷ್ಣ ಭಟ್, ವಿಕ್ರಂ ಭಟ್, ಸುಧೀರ್ ಪೂಜಾರಿ ಹಾಗೂ ಮಹೇಶ್ ಪುತ್ರನ್ ಉಪಸ್ಥಿತರಿದ್ದರು.

ಜೀರ್ಣೋದ್ಧಾರ ಸಮಿತಿಯ ಸದಸ್ಯರು, ಆಡಳಿತ ಮೊಕ್ತೇಸರರು, ತಂತ್ರಿವರ್ಗ, ಅರ್ಚಕ ವೃಂದ ಹಾಗೂ ಊರಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.



