Friday, October 2, 2026

spot_img

ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 125ನೇ ವರ್ಷಾಚರಣೆಗೆ ಚಾಲನೆ

ಉಡುಪಿ: ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ತಾಂಗದಗಡಿ ಪ್ರಸಕ್ತ ವರ್ಷ 125ನೇ ವರ್ಷಕ್ಕೆ ಕಾಲಿಟ್ಟಿದ್ದು, ಇದರ ಸಂಭ್ರಮಾಚರಣೆಗೆ ಗಾಂಧಿ ಜಯಂತಿಯಂದು ಕರಸೇವೆಯ ಮೂಲಕ ಚಾಲನೆ ನೀಡಲಾಯಿತು.nಶ್ರೀ ವೆಂಕಟರಮಣ ದೇವಸ್ಥಾನದ ಅರ್ಚಕ ಕೆ. ನವೀನ್ ಐತಾಳ್ ಅವರು ಪ್ರಾರ್ಥನಾ ವಿಧಿ ನೆರವೇರಿಸಿದ ಬಳಿಕ ಕರಸೇವೆಗೆ ಚಾಲನೆ ನೀಡಲಾಯಿತು. ಶಾಲೆಯ ಹಳೆಯ ಕಟ್ಟಡದ ಮಾಡಿನ ಹಂಚುಗಳನ್ನು ತೆರವುಗೊಳಿಸಿ, ಅವುಗಳನ್ನು ವ್ಯವಸ್ಥಿತವಾಗಿ ನಿಗದಿತ ಸ್ಥಳಕ್ಕೆ ವರ್ಗಾಯಿಸುವ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯ ಹಳೆ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಮಂಡಳಿ ಸದಸ್ಯರು ಹಾಗೂ ಅಭಿಮಾನಿಗಳು ಉತ್ಸಾಹದಿಂದ ಪಾಲ್ಗೊಂಡರು.

ಶಾಲಾ ಕಟ್ಟಡ ನಿರ್ಮಾಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಸದಾನಂದ ನಾಯಕ್ ಮಾತನಾಡಿ, 125ನೇ ವರ್ಷಾಚರಣೆಯನ್ನು ಹಳೆ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಮಂಡಳಿ ಹಾಗೂ ಅಭಿಮಾನಿ ಬಳಗದ ಸಹಕಾರದೊಂದಿಗೆ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ಇದರ ಅಂಗವಾಗಿ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡವನ್ನು ನವೀಕರಿಸುವ ಚಿಂತನೆ ನಡೆದಿದೆ. ಶಾಲೆಯಲ್ಲಿ ಅತ್ಯಾಧುನಿಕ ಮಾದರಿಯ ಶೌಚಾಲಯ ನಿರ್ಮಿಸುವುದರ ಜೊತೆಗೆ, ಶಿಕ್ಷಣದ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಗೌರವ ಶಿಕ್ಷಕರನ್ನು ನೇಮಿಸಿ, ಅವರ ವೇತನಕ್ಕಾಗಿ ಪ್ರತ್ಯೇಕ ನಿಧಿ ಸ್ಥಾಪಿಸುವ ಯೋಜನೆಯಿದೆ. ಮುಂದಿನ ಹಂತದಲ್ಲಿ ಶಾಲೆಯ ಹಿಂಭಾಗದಲ್ಲಿ ಪ್ರತ್ಯೇಕ ಆಂಗ್ಲ ಮಾಧ್ಯಮ ಶಾಲೆ ನಿರ್ಮಿಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ ಎಂದರು.

ಶಾಲಾ ಮುಖ್ಯೋಪಾಧ್ಯಾಯ ಸಂತೋಷ್ ಕರ್ನೆಲಿಯೋ ಮಾತನಾಡಿ, 1901ರಲ್ಲಿ ಹಿರಿಯರು ಸ್ಥಾಪಿಸಿದ ಈ ಶಾಲೆ ಇದೀಗ 125ನೇ ವರ್ಷಕ್ಕೆ ಕಾಲಿಟ್ಟಿದೆ. ಶಾಲೆಯ ಬೆಳವಣಿಗೆಗೆ ಶ್ರಮಿಸಿದ ಹಿರಿಯರು ಹಾಗೂ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸಿದ ಎಲ್ಲರನ್ನು ಈ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸ್ಮರಿಸಲಾಗುವುದು ಎಂದರು. ಶಾಲೆಯ ಅಭಿವೃದ್ಧಿಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಪಾತ್ರ ಮಹತ್ವದ್ದಾಗಿದೆ. ಹಳೆ ವಿದ್ಯಾರ್ಥಿ ಸಂಘವೂ 60 ವರ್ಷಗಳನ್ನು ಪೂರೈಸಿರುವುದು ವಿಶೇಷ. ಹಳೆ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಮಂಡಳಿ ಹಾಗೂ ಶಾಲಾಭಿಮಾನಿಗಳ ನೆರವು ಮತ್ತು ಸಹಕಾರದಿಂದ 125ನೇ ವರ್ಷಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಪ್ರಸ್ತುತ ಶಾಲೆಯಲ್ಲಿ 200ಕ್ಕೂ ಅಧಿಕ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದು ಸಂತಸದ ಸಂಗತಿ. ಮುಂದಿನ ದಿನಗಳಲ್ಲಿ ಶಾಲೆಯ ಶೈಕ್ಷಣಿಕ ಗುಣಮಟ್ಟ ಹಾಗೂ ಮೂಲಸೌಕರ್ಯಗಳನ್ನು ಮತ್ತಷ್ಟು ಸುಧಾರಿಸುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವ ಉದ್ದೇಶವಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯ ಡೆನಿಸ್ ಕರ್ನೆಲಿಯೋ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಎಸ್. ಬಾರಿತ್ತಾಯ, ಟ್ರಸ್ಟ್ ಅಧ್ಯಕ್ಷ ಯು.ಜೆ. ಮಹಮ್ಮದ್ ಹನೀಫ್, ವಿಶೇಷ ಸಮಿತಿ ಪ್ರಧಾನ ಕಾರ್ಯದರ್ಶಿ ಅಮ್ಮುಂಜೆ ಸದಾನಂದ ನಾಯಕ್, ಸಮಿತಿ ಪದಾಧಿಕಾರಿಗಳಾದ ಚಂದ್ರಕಾಂತ್ ಕೆ.ಎನ್., ಕೃಷ್ಣ ಶ್ರೀಧರನ್, ಕೆ. ಹರೀಶ್ ಆಚಾರ್ಯ, ಬಾಲಚಂದ್ರ ಗಾಂಸ್ಕರ್, ಕಮಲಾಕ್ಷ ಶೇಟ್, ಗೋಡ್‌ಫ್ರಿ ಡಿಸಿಲ್ವಾ, ವಿನಯ್ ಕುಮಾರ್, ರಘುರಾಮ್ ಆಚಾರ್ಯ, ಹಯವದನ ಭಟ್, ತ್ರಿವೇಣಿ ರಘುರಾಮ ಆಚಾರ್ಯ, ಚಂದ್ರಕಾಂತ್ ಯು., ಎಸ್. ರಾಮಚಂದ್ರ ನಾಯಕ್, ದುರ್ಗಾಪ್ರಸಾದ್, ಪ್ರದ್ಯುಮ್ನ ಗಿರಿಧರ ಆಚಾರ್ಯ, ಶೇಖರ ಪಿ., ಗಣೇಶ್ ಕುಮಾರ್, ಅಬೂಬಕ್ಕರ್ ಸಿದ್ದಿಕ್, ಸುನೀಲ್ ಗುಂಡಿಬೈಲು, ಅನಿಲ್ ಗುಂಡಿಬೈಲು, ಸಮಿತಾ, ಕವಿತಾ ಶೆಟ್ಟಿ, ಸರೋಜಿನಿ, ಜಯ ಆಚಾರ್ಯ, ಪೂರ್ಣಿಮಾ ಆಚಾರ್ಯ, ಸುನೀತಾ ಆಚಾರ್ಯ, ಶೋಭಾ ಆಚಾರ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ವೃಂದ, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಕರಸೇವೆಯಲ್ಲಿ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles