ಉಡುಪಿ: ಜಿಲ್ಲೆಯಲ್ಲಿ ಶಸ್ತ್ರಾಸ್ತ್ರಗಳ ಬಳಕೆಗೆ ಸಂಬಂಧಿಸಿದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸರು ಜಿಲ್ಲಾದ್ಯಂತ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಿದ್ದು, ಒಂದು ತಿಂಗಳ ಅವಧಿಯಲ್ಲಿ ಒಟ್ಟು 2,925 ಶಸ್ತ್ರಾಸ್ತ್ರಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ನಾಲ್ಕು ಶಸ್ತ್ರಾಸ್ತ್ರಗಳಲ್ಲಿ ಅನಧಿಕೃತ ಮಾರ್ಪಾಡು ಮಾಡಿರುವುದು ಪತ್ತೆಯಾಗಿದ್ದು, ಸಂಬಂಧಪಟ್ಟವರ ವಿರುದ್ಧ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.

ಶಸ್ತ್ರಾಸ್ತ್ರ ಹೊಂದಿರುವವರ ಹಿನ್ನೆಲೆ, ಶಸ್ತ್ರಾಸ್ತ್ರಗಳ ಸ್ಥಿತಿ ಹಾಗೂ ಅವುಗಳಲ್ಲಿ ಯಾವುದೇ ಅನಧಿಕೃತ ಬದಲಾವಣೆಗಳನ್ನು ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ಇಲಾಖೆ ಈ ವಿಶೇಷ ಕಾರ್ಯಾಚರಣೆ ಕೈಗೊಂಡಿತ್ತು. ತಪಾಸಣೆ ವೇಳೆ 1,759 ಎಸ್‌ಬಿಎಂಎಲ್, 554 ಎಸ್‌ಬಿಬಿಎಲ್, 318 ಡಿಬಿಬಿಎಲ್, 6 ಡಿಬಿಎಂಎಲ್, 120 ಪಿಸ್ತೂಲ್, 119 ರಿವಾಲ್ವರ್, 30 ರೈಫಲ್, 13 ಬೋರ್ ಗನ್ ಹಾಗೂ 6 ಎನ್‌ಪಿ ಬೋರ್ ಶಸ್ತ್ರಾಸ್ತ್ರಗಳನ್ನು ಪರಿಶೀಲಿಸಲಾಗಿದೆ.

ಈ ಪೈಕಿ ನಾಲ್ಕು ಶಸ್ತ್ರಾಸ್ತ್ರಗಳಲ್ಲಿ ಅನಧಿಕೃತ ಮಾರ್ಪಾಡು ಮಾಡಿರುವುದು ಕಂಡುಬಂದಿದೆ. ಈ ಸಂಬಂಧ ಶಂಕರನಾರಾಯಣ, ಕೋಟ, ಬ್ರಹ್ಮಾವರ ಹಾಗೂ ಕಾರ್ಕಳ ಟೌನ್ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಪ್ರಕರಣ ದಾಖಲಿಸಲಾಗಿದೆ. ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ-1959ರ ಕಲಂ 25ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ. ಇದರ ಜತೆಗೆ ರೌಡಿ ಹಾಳೆ ಹೊಂದಿರುವ ಹಾಗೂ ಶಸ್ತ್ರಾಸ್ತ್ರ ಪರವಾನಗಿ ಪಡೆದಿರುವ ವ್ಯಕ್ತಿಗಳ ಪ್ರಸ್ತುತ ನಡವಳಿಕೆ ಮತ್ತು ಪರವಾನಗಿ ಪಡೆದ ಬಳಿಕ ಅವರು ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಸಾರ್ವಜನಿಕರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಶಸ್ತ್ರಾಸ್ತ್ರಗಳ ಅಕ್ರಮ ಬಳಕೆ ಮತ್ತು ಅನಧಿಕೃತ ಮಾರ್ಪಾಡುಗಳ ವಿರುದ್ಧ ಮುಂದಿನ ದಿನಗಳಲ್ಲಿಯೂ ನಿರಂತರ ನಿಗಾ ವಹಿಸಿ, ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ. ಅನಧಿಕೃತ ಶಸ್ತ್ರಾಸ್ತ್ರ ಬಳಕೆ, ಮಾರ್ಪಾಡು ಅಥವಾ ಸಂಗ್ರಹದ ಬಗ್ಗೆ ಮಾಹಿತಿ ದೊರೆತಲ್ಲಿ ಸಾರ್ವಜನಿಕರು ಸಮೀಪದ ಪೊಲೀಸ್ ಠಾಣೆ ಅಥವಾ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂಗೆ 0820-2526444, 0820-2526709 ದೂರವಾಣಿ ಸಂಖ್ಯೆಗಳ ಮೂಲಕ ಮಾಹಿತಿ ನೀಡಬಹುದು. ವಾಟ್ಸ್‌ಆ್ಯಪ್ ಮೂಲಕ 9480805400 ಸಂಖ್ಯೆಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.


