ಉಡುಪಿ: ಜಗದೊಡೆಯ ಶ್ರೀಕೃಷ್ಣನ ಜನ್ಮಾಷ್ಟಮಿ ಅಂಗವಾಗಿ ತಿಂಗಳಿಡೀ ನಡೆಯುತ್ತಿರುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೆಪ್ಟೆಂಬರ್ 4ರಿಂದ 6ರವರೆಗೆ ವಿಶೇಷ ಮೆರುಗು ದೊರೆಯಲಿದೆ ಎಂದು ಪರ್ಯಾಯ ಶಿರೂರು ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸೆಪ್ಟೆಂಬರ್ 4ರ ರಾತ್ರಿ 12.12ಕ್ಕೆ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ನಡೆಯಲಿದೆ. ಸೆಪ್ಟೆಂಬರ್ 5ರಂದು ಬೆಳಗ್ಗೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದ್ದು, ರಾಜಾಂಗಣದಲ್ಲಿ ಹುಲಿವೇಷ ಕುಣಿತ ಸೇರಿದಂತೆ ವಿವಿಧ ಸ್ಪರ್ಧೆಗಳು ಜರುಗಲಿವೆ ಎಂದರು.

ಸೆಪ್ಟೆಂಬರ್ 5ರಂದು ಮಧ್ಯಾಹ್ನ 3.30ಕ್ಕೆ ಚಿನ್ನದ ರಥದಲ್ಲಿ ಶ್ರೀಕೃಷ್ಣನ ಮೃಣ್ಮಯ ವಿಗ್ರಹದ ಮೆರವಣಿಗೆ ನಡೆಯಲಿದೆ. ವಿಟ್ಲಪಿಂಡಿ ಹಾಗೂ ಶ್ರೀಕೃಷ್ಣಲೀಲೋತ್ಸವದ ಅಂಗವಾಗಿ ರಥಬೀದಿಯ ವಿಶೇಷ ವೇದಿಕೆಯಲ್ಲಿ ಆಹ್ವಾನಿತ ಮಲ್ಲಯುದ್ಧ ಪ್ರವೀಣರಿಂದ ಮಲ್ಲಯುದ್ಧ ಪ್ರದರ್ಶನ ಆಯೋಜಿಸಲಾಗಿದೆ. ಇದು ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಲಿದೆ ಎಂದು ಶ್ರೀಗಳು ತಿಳಿಸಿದರು.

ಅಷ್ಟಮಿ ವಿಟ್ಲಪಿಂಡಿ ಉತ್ಸವದ ಅಂಗವಾಗಿ ಎರಡು ದಿನಗಳ ಕಾಲ ವಿಶೇಷ ವೇದಿಕೆಯಲ್ಲಿ ಹುಲಿವೇಷ ಸ್ಪರ್ಧೆ ನಡೆಯಲಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಮಕ್ಕಳಿಗಾಗಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಅಂತರರಾಷ್ಟ್ರೀಯ ಮಟ್ಟದ ಕಲಾವಿದರಿಂದಲೂ ವಿವಿಧ ಕಲಾ ಪ್ರದರ್ಶನಗಳು ನಡೆಯಲಿವೆ ಎಂದರು.

ಸೆಪ್ಟೆಂಬರ್ 6ರಂದು ತಿಂಗಳಿಡೀ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮದ ಸಮಾರೋಪ ಸಮಾರಂಭ ನಡೆಯಲಿದೆ. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಅಷ್ಟಮಂಗಲ ಪ್ರಶ್ನೆಯ ಅನುಸಾರ ಸೆಪ್ಟೆಂಬರ್ 6ರಂದು ಕೋಟಿ ತುಳಸಿ ಅರ್ಚನೆ ಕೈಗೊಳ್ಳಲಾಗಿದೆ ಎಂದು ಶಿರೂರು ಶ್ರೀಗಳು ತಿಳಿಸಿದರು.
ಭಕ್ತಿ, ಧಾರ್ಮಿಕ ಆಚರಣೆ, ಸಾಂಸ್ಕೃತಿಕ ವೈಭವ ಹಾಗೂ ಜನಪದ ಕಲಾ ಪ್ರದರ್ಶನಗಳ ಸಮ್ಮಿಲನದೊಂದಿಗೆ ಈ ಬಾರಿಯ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವವನ್ನು ವೈಭವೋಪೇತವಾಗಿ ಆಚರಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ಹೇಳಿದರು.



