ಉಡುಪಿ: ಮಲ್ಪೆ ಬಂದರಿನ ಮೀನುಗಾರಿಕಾ ಬೋಟಿನ ಕ್ಯಾಬಿನ್ನಲ್ಲಿ ಚಿಕ್ಕಮಗಳೂರು ಮೂಲದ ಕಾರ್ಮಿಕನೊಬ್ಬನ ಶವ ಪತ್ತೆಯಾಗಿದ್ದು, ಕೊಲೆ ಪ್ರಕರಣಕ್ಕೆ ಸಂಬಂಧಿಸಿ ರಾಯಚೂರು ಮೂಲದ ಮತ್ತೊಬ್ಬ ಕಾರ್ಮಿಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತರನ್ನು ಅಭಿಷೇಕ್ (24) ಎಂದು ಗುರುತಿಸಲಾಗಿದೆ.

ಜೀವನೋಪಾಯಕ್ಕಾಗಿ ಚಿಕ್ಕಮಗಳೂರಿನಿಂದ ಮಲ್ಪೆಗೆ ಬಂದಿದ್ದ ಅಭಿಷೇಕ್ ಮೀನುಗಾರಿಕಾ ಬೋಟಿನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಸೋಮವಾರ ರಾತ್ರಿ ಬೋಟಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಅಭಿಷೇಕ್ ಹಾಗೂ ಸಹಕಾರ್ಮಿಕ ಗೋವಿಂದರಾಜು ನಡುವೆ ಗಲಾಟೆ ನಡೆದಿದ್ದು, ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ ಎನ್ನಲಾಗಿದೆ. ಈ ವೇಳೆ ಗೋವಿಂದರಾಜು ಅಭಿಷೇಕ್ಗೆ ಚೂರಿಯಿಂದ ಇರಿದ ಪರಿಣಾಮ ಅವರು ಮೃತಪಟ್ಟಿದ್ದಾರೆ.

ಮಂಗಳವಾರ ಬೆಳಗ್ಗೆ ಬೋಟಿನ ಕ್ಯಾಬಿನ್ನಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಅಭಿಷೇಕ್ ಅವರ ಮೃತದೇಹ ಪತ್ತೆಯಾಗಿದೆ. ಘಟನೆ ಬಳಿಕ ಆರೋಪಿ ಗೋವಿಂದರಾಜು ರೈಲು ನಿಲ್ದಾಣದ ಮೂಲಕ ಹೈದರಾಬಾದ್ ಅಥವಾ ಮುಂಬೈಗೆ ಪರಾರಿಯಾಗಲು ಯತ್ನಿಸಿದ್ದ ಎನ್ನಲಾಗಿದೆ. ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಗೋವಿಂದರಾಜು ಸುಮಾರು 15 ವರ್ಷಗಳಿಂದ ಮನೆಗೆ ತೆರಳದೆ ಮುಂಬೈ, ಹೈದರಾಬಾದ್ ಸೇರಿದಂತೆ ವಿವಿಧೆಡೆ ಕೆಲಸ ಮಾಡಿಕೊಂಡಿದ್ದಾಗಿ ತಿಳಿದುಬಂದಿದೆ ಎನ್ನಲಾಗಿದೆ.

ಕೊಲೆಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಕ್ಷುಲ್ಲಕ ವಿಚಾರಕ್ಕೆ ಆರಂಭವಾದ ಗಲಾಟೆಯೇ ಕೊಲೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮಲ್ಪೆ ಬಂದರಿಗೆ ದೇಶದ ವಿವಿಧ ಭಾಗಗಳಿಂದ ಸಾವಿರಾರು ಕಾರ್ಮಿಕರು ಉದ್ಯೋಗಕ್ಕಾಗಿ ಆಗಮಿಸುತ್ತಿದ್ದು, ಕಾರ್ಮಿಕರ ನಡುವಿನ ಗಲಾಟೆ ಹಾಗೂ ಮೀನುಗಾರಿಕೆ ಸಂದರ್ಭದಲ್ಲಿ ಸಂಭವಿಸುವ ಅವಘಡಗಳು ಆಗಾಗ್ಗೆ ವರದಿಯಾಗುತ್ತಿವೆ. ಇದೀಗ ಬೋಟಿನೊಳಗೇ ಕಾರ್ಮಿಕನ ಕೊಲೆಯಾಗಿರುವುದು ಆತಂಕ ಮೂಡಿಸಿದೆ.


