ಉಡುಪಿ: ಬಹುಕಾಲದಿಂದ ನೆನೆಗುದಿಗೆ ಬಿದ್ದಿದ್ದ ಹೆಬ್ರಿ–ಪರ್ಕಳ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್–169ಎ) ಕಾಮಗಾರಿಗೆ ಮಹತ್ವದ ಬೆಳವಣಿಗೆ ಕಂಡಿದ್ದು, ಅರಣ್ಯ ಇಲಾಖೆಯ ವ್ಯಾಪ್ತಿಯ ಭೂಮಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

ಹೆಬ್ರಿ–ಪರ್ಕಳ ನಡುವಿನ ಮುಳ್ಳುಗುಡ್ಡೆ ಸಮೀಪ ಸುಮಾರು 1.2 ಕಿ.ಮೀ. ರಸ್ತೆ ಅರಣ್ಯ ಪ್ರದೇಶದ ಮೂಲಕ ಹಾದು ಹೋಗುತ್ತಿರುವುದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು. 2023ರಿಂದ ಅರಣ್ಯ ಇಲಾಖೆಯ ಅನುಮೋದನೆಗಾಗಿ ಪ್ರಸ್ತಾವನೆ ಪರಿಸರ ಪೋರ್ಟಲ್‌ನಲ್ಲಿ ಬಾಕಿ ಉಳಿದಿತ್ತು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ನಿರಂತರ ಪ್ರಯತ್ನದ ಫಲವಾಗಿ, ರಾಜ್ಯ ಸರ್ಕಾರ ಉಡುಪಿ ತಾಲೂಕಿನ ಪೆಡೂರು ಗ್ರಾಮದ 2.35 ಹೆಕ್ಟೇರ್ ಹಾಗೂ ಹೆಬ್ರಿ ಗ್ರಾಮದ 0.064 ಹೆಕ್ಟೇರ್, ಒಟ್ಟು 2.49 ಹೆಕ್ಟೇರ್ ಅರಣ್ಯ ಭೂಮಿಯನ್ನು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಹಸ್ತಾಂತರಿಸಲು ಅನುಮೋದನೆ ನೀಡಿದೆ.

ಈ ಅನುಮೋದನೆಯಿಂದ ಹೆಬ್ರಿ–ಪರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಇದ್ದ ಪ್ರಮುಖ ಅಡ್ಡಿ ನಿವಾರಣೆಯಾಗಿದ್ದು, ಕಾಮಗಾರಿಯನ್ನು ಶೀಘ್ರ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹೆದ್ದಾರಿ ಕಾಮಗಾರಿ ಶೀಘ್ರ ಆರಂಭವಾಗುವ ನಿರೀಕ್ಷೆ ವ್ಯಕ್ತವಾಗಿದ್ದು, ಈ ಭಾಗದ ಸಾರ್ವಜನಿಕರ ಬಹುಕಾಲದ ಬೇಡಿಕೆಗೆ ಸ್ಪಂದಿಸಿದಂತಾಗಿದೆ.


