ಉಡುಪಿ: ಅಪ್ರಾಪ್ತ ಬಾಲಕನನ್ನು ಅಪಹರಿಸಿ ಕೇರಳಕ್ಕೆ ಕರೆದೊಯ್ದು ಬಲವಂತವಾಗಿ ಕೆಲಸಕ್ಕೆ ಸೇರಿಸಿದ ಆರೋಪದಡಿ ಬ್ರಹ್ಮಾವರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ಆರೋಪಿಗಳಾದ ಸಾಲಿಕೇರಿ ವಾರಂಬಳ್ಳಿ ನಿವಾಸಿ ವಿಖ್ಯಾತ್ ಆಚಾರ್ಯ (19), ಹಾಗೂ ಮಟಪಾಡಿ ಗ್ರಾಮದ ನಿವಾಸಿ ಸುಚಿತ್ ನಾಯಕ್ (20) ನನ್ನು ಬಂಧಿಸಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಬ್ರಹ್ಮಾವರ ಮೂಲದ ದೂರುದಾರರ ಅಪ್ರಾಪ್ತ ವಯಸ್ಸಿನ ಮಗನನ್ನು ಜೂನ್ 1ರಂದು ಬೆಳಿಗ್ಗೆ ಸುಮಾರು 8.30ಕ್ಕೆ ಬ್ರಹ್ಮಾವರ ಬಸ್ ನಿಲ್ದಾಣದಿಂದ ಆರೋಪಿಗಳು ಅಪಹರಿಸಿ, ಕೇರಳದ ತಲಪಾಡಿ ಸಮೀಪದ ಕುಂಜತ್ತೂರು ಪದವಿನಲ್ಲಿರುವ ವುಡ್ ಕಂಪನಿಯೊಂದಕ್ಕೆ ಬಲವಂತವಾಗಿ ಕರೆದುಕೊಂಡು ಹೋಗಿ ಕೆಲಸಕ್ಕೆ ಸೇರಿಸಿದ್ದರು ಎನ್ನಲಾಗಿದೆ.

ಬಾಲಕ ಮನೆಗೆ ಹೋಗುವುದಾಗಿ ಹೇಳಿದರೂ ಆರೋಪಿಗಳು ಅವಕಾಶ ನೀಡದೆ, ಜೂನ್ 9ರಂದು ಮಧ್ಯಾಹ್ನ ಸುಮಾರು 1.30ಕ್ಕೆ ತಂಗಿದ್ದ ಕೋಣೆಯಲ್ಲಿ ಆರೋಪಿಗಳಲ್ಲಿ ಒಬ್ಬನು ವಿದ್ಯುತ್ ತಂತಿಯಿಂದ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮತ್ತೊಬ್ಬ ಆರೋಪಿ ಚೂರಿ ತೋರಿಸಿ, ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ. ಈ ಘಟನೆಯನ್ನು ಮತ್ತೊಬ್ಬ ಆರೋಪಿ ಮೊಬೈಲ್ನಲ್ಲಿ ವೀಡಿಯೊ ಚಿತ್ರೀಕರಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಮೂರನೇ ಆರೋಪಿ ಬಾಲಾಪರಾಧಿಯಾಗಿದ್ದು, ಆತನನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿದೆ.


