Saturday, October 10, 2026

spot_img

ಒಂಟಿ ಮಹಿಳೆಯ ಮನೆಗೆ ನುಗ್ಗಿ ಚಿನ್ನದ ಸರ ಸುಲಿಗೆ: ಇಬ್ಬರ ಬಂಧನ

ಉಡುಪಿ : ಜನಗಣತಿ ಕುರಿತು ಮಾಹಿತಿ ಕೇಳುವ ನೆಪದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧೆಯ ಮನೆಗೆ ನುಗ್ಗಿ, ಅವರನ್ನು ದೂಡಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸುಲಿಗೆ ಮಾಡಿದ ಪ್ರಕರಣವನ್ನು ಉಡುಪಿ ನಗರ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ, ಚಿನ್ನದ ಸರ ಸೇರಿದಂತೆ ಒಟ್ಟು 5.53 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪುತ್ತೂರು ಗ್ರಾಮದ ನಿಟ್ಟೂರು ನಿವಾಸಿ ಶಾಂತ ಕಾರಂತ್ (74) ಅವರು ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಅ. 7ರಂದು ಸಂಜೆ ಸುಮಾರು 3.47ರ ವೇಳೆಗೆ ಇಬ್ಬರು ಅಪರಿಚಿತರು ಜನಗಣತಿ ಕುರಿತು ಮಾಹಿತಿ ಕೇಳುವ ನೆಪದಲ್ಲಿ ಅವರ ಮನೆಗೆ ಬಂದಿದ್ದರು. ಮಾತನಾಡುತ್ತಾ, ಮಗನನ್ನು ವಿಚಾರಿಸಿ ತಾವು ತಂದಿದ್ದ ಕಾಗದಕ್ಕೆ ಸಹಿ ಮಾಡುವುದಾಗಿ ಹೇಳಿ ಶಾಂತ ಕಾರಂತ್ ಅವರು ಮನೆಯೊಳಗೆ ತೆರಳಿದ ಸಂದರ್ಭದಲ್ಲಿ ಇಬ್ಬರೂ ಒಳನುಗ್ಗಿ ಅವರನ್ನು ದೂಡಿ ಕೆಳಕ್ಕೆ ಬೀಳಿಸಿದ್ದರು. ಬಳಿಕ ಕುತ್ತಿಗೆಯಲ್ಲಿದ್ದ ಸುಮಾರು 30 ಗ್ರಾಂ ತೂಕದ ಗಾರ್ನೇಟ್ ಮಣಿ ಹೊಂದಿದ ಚಿನ್ನದ ಸರವನ್ನು ಬಲವಂತವಾಗಿ ಎಳೆದುಕೊಂಡು ಪರಾರಿಯಾಗಿದ್ದರು. ಸುಲಿಗೆಯಾದ ಸರದ ಅಂದಾಜು ಮೌಲ್ಯ ₹4 ಲಕ್ಷ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಈ ಕುರಿತು ಶಾಂತ ಕಾರಂತ್ ಅವರ ಪುತ್ರ ಶ್ರೀನಿವಾಸ ಕಾರಂತ್ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಯನ್ನು ಉಡುಪಿ ನಗರ ಪೊಲೀಸ್ ನಿರೀಕ್ಷಕ ಮಹೇಶ ಪ್ರಸಾದ್ ಅವರ ನೇತೃತ್ವದಲ್ಲಿ ವಿವಿಧ ಆಯಾಮಗಳಲ್ಲಿ ನಡೆಸಲಾಗಿತ್ತು. ಅ. 10ರಂದು ಸ್ಥಳೀಯ ಮಾಹಿತಿದಾರರಿಂದ ದೊರೆತ ಖಚಿತ ಮಾಹಿತಿಯ ಆಧಾರದಲ್ಲಿ ಮಣಿಪಾಲದ ಮಣ್ಣಪಳ್ಳದಲ್ಲಿ ಆರೋಪಿಗಳಾದ ವಾದಿರಾಜ್ ಗಾಣಿಗ (44), ನಿಟ್ಟೂರು, ಪುತ್ತೂರು ಗ್ರಾಮ ಹಾಗೂ ಸಚಿನ್ (30), ಪಡು ಗ್ರಾಮ, ಕಾಪು ತಾಲೂಕು ಅವರನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದು, ಸುಲಿಗೆ ಮಾಡಿದ ಚಿನ್ನದ ಸರವನ್ನು ಮಣಿಪಾಲದ ಇಂಡಸ್ಟ್ರಿಯಲ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಅಡವಿಟ್ಟಿರುವುದಾಗಿ ತಿಳಿಸಿದ್ದರು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಪೊಲೀಸರು ಆರೋಪಿಗಳಿಂದ ಅಂದಾಜು 4.50 ಲಕ್ಷ ಮೌಲ್ಯದ 34 ಗ್ರಾಂ ತೂಕದ ಚಿನ್ನದ ಸರ, ಕೃತ್ಯಕ್ಕೆ ಬಳಸಿದ 90 ಸಾವಿರ ಮೌಲ್ಯದ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ 13 ಸಾವಿರ ಮೌಲ್ಯದ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು ವಶಪಡಿಸಿಕೊಂಡ ಸೊತ್ತುಗಳ ಮೌಲ್ಯ 5.53 ಲಕ್ಷ ಎಂದು ಅಂದಾಜಿಸಲಾಗಿದೆ. ಪ್ರಕರಣದ ಮೊದಲ ಆರೋಪಿ ವಾದಿರಾಜ್ ಗಾಣಿಗ ನೆರೆಹೊರೆಯವನಾಗಿದ್ದು, ದೂರುದಾರರು ಹಾಗೂ ಇತರರಿಂದ ಸಾಲ ಪಡೆದಿದ್ದ ಎನ್ನಲಾಗಿದೆ.

ಎರಡನೇ ಆರೋಪಿ ಕೂಡ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸುವ ಹಾಗೂ ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಇಬ್ಬರೂ ಸೇರಿ ಚಿನ್ನದ ಸರ ಸುಲಿಗೆ ಮಾಡಿರುವುದಾಗಿ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಬಂಧಿತ ಆರೋಪಿಗಳನ್ನು ಅ. 10ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles