Saturday, October 10, 2026

spot_img

ಕುಕ್ಕುಜೆಯಿಂದ ದನಕಳ್ಳತನ ಮಾಡಿ ಕಸಾಯಿಖಾನೆಗೆ ಸಾಗಾಟ: ಇಬ್ಬರ ಬಂಧನ

ಉಡುಪಿ: ಕಾರ್ಕಳ ತಾಲೂಕಿನ ಕುಕ್ಕುಜೆ ಗ್ರಾಮದ ಬಳಿ ಮೇಯುತ್ತಿದ್ದ ಜಾನುವಾರುಗಳನ್ನು ಕಳವು ಮಾಡಿ, ವಧೆಗಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಹಿರಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಸಾಗಾಟಕ್ಕೆ ಬಳಸಿದ್ದ ಗೂಡ್ಸ್‌ ಟೆಂಪೋವನ್ನು ವಶಪಡಿಸಿಕೊಂಡಿದ್ದು, ವಾಹನದಲ್ಲಿದ್ದ ನಾಲ್ಕು ಜಾನುವಾರುಗಳನ್ನು ರಕ್ಷಿಸಿದ್ದಾರೆ.

ಅ. 9ರಂದು ಸಂಜೆ 7.30ರ ಸುಮಾರಿಗೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಹಿರಿಯಡ್ಕ ಠಾಣೆಯ ಅಪರಾಧ ಪತ್ತೆ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿದರು. ಹರಿಖಂಡಿಗೆಯಿಂದ ಹಿರಿಯಡ್ಕದ ಕಡೆಗೆ ಗೂಡ್ಸ್‌ ಟೆಂಪೋದಲ್ಲಿ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಲಭಿಸಿತ್ತು.

ಬೊಮ್ಮಾರಬೆಟ್ಟು ಗ್ರಾಮದ ಕೊಟ್ನಕಟ್ಟೆ ಬಳಿ ಪೊಲೀಸರು ವಾಹನವನ್ನು ನಿಲ್ಲಿಸುವಂತೆ ಸೂಚಿಸಿದರೂ ಚಾಲಕ ನಿಲ್ಲಿಸದೆ ಮುಂದೆ ಸಾಗಿದ್ದಾನೆ. ಕೂಡಲೇ ವಾಹನದ ನೋಂದಣಿ ಸಂಖ್ಯೆಯನ್ನು ಠಾಣೆಗೆ ತಿಳಿಸಿದ ಪೊಲೀಸರು, ಹಿರಿಯಡ್ಕ ಠಾಣೆಯ ಎದುರಿನ ಅಂಜಾರು ಜಂಕ್ಷನ್‌ ಬಳಿ ಟೆಂಪೋವನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಅದರೊಳಗೆ ನಾಲ್ಕು ಜಾನುವಾರುಗಳು ಪತ್ತೆಯಾಗಿವೆ. ವಾಹನದಲ್ಲಿದ್ದ ಇಬ್ಬರನ್ನು ವಿಚಾರಿಸಿದಾಗ, ಅವರು ಕಾಪು ತಾಲೂಕಿನ ಕುರ್ಕಾಲು ಗ್ರಾಮದ ಸುಭಾಷ್ ನಗರ, ಸರ್ಕಾರಿಗುಡ್ಡೆ ನಿವಾಸಿ ಅಬ್ದುಲ್ ಸತ್ತರ್ (54) ಹಾಗೂ ಇನ್ನಂಜೆ ಗ್ರಾಮದ ಮಾಳದ ಬೆಟ್ಟು ನಿವಾಸಿ ಯೋಗೀಶ ನಾಯ್ಕ್ (49) ಎಂದು ತಿಳಿದುಬಂದಿದೆ.

ಪೊಲೀಸರ ವಿಚಾರಣೆ ವೇಳೆ, ಕಾರ್ಕಳ ತಾಲೂಕಿನ ಕುಕ್ಕುಜೆ ಗ್ರಾಮದ ಪಲಬೆಟ್ಟು ನಿವಾಸಿ ಕೃಷ್ಣ ಪೂಜಾರಿ ಅವರ ಮನೆಯ ಸಮೀಪ ಮೇಯುತ್ತಿದ್ದ ಜಾನುವಾರುಗಳನ್ನು ಕಳವು ಮಾಡಿ, ಕಸಾಯಿಖಾನೆಗೆ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸುತ್ತಿದ್ದುದಾಗಿ ಆರೋಪಿಗಳು ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಜಾನುವಾರುಗಳ ಕುತ್ತಿಗೆ ಹಾಗೂ ಕಾಲುಗಳಿಗೆ ನೈಲಾನ್ ಹಗ್ಗಗಳನ್ನು ಕಟ್ಟಿ, ಅವುಗಳಿಗೆ ಹಿಂಸೆಯಾಗುವ ರೀತಿಯಲ್ಲಿ ಯಾವುದೇ ಪರವಾನಗಿ ಇಲ್ಲದೆ ವಾಹನದಲ್ಲಿ ತುಂಬಿಸಿಕೊಂಡು ಸಾಗಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಜಾನುವಾರುಗಳ ಅಂದಾಜು ಮೌಲ್ಯ 20 ಸಾವಿರ ರೂ. ಹಾಗೂ ಟೆಂಪೋ ಮೌಲ್ಯ ಸುಮಾರು ಮೂರು ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಈ ಸಂಬಂಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles