ಉಡುಪಿ: ಹಸುವನ್ನು ಅಟ್ಟಿಸಿಕೊಂಡು ಹೋಗುವ ಸಂದರ್ಭದಲ್ಲಿ ಆಯತಪ್ಪಿ ಬಾವಿಗೆ ಬಿದ್ದ ಭಾರಿ ಗಾತ್ರದ ಗೂಳಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದ ಘಟನೆ ಕಾರ್ಕಳ ತಾಲೂಕಿನ ಪರಪ್ಪು ನಾಗನಕಟ್ಟೆ ಪ್ರದೇಶದಲ್ಲಿ ನಡೆದಿದೆ.

ಪರಪ್ಪು ನಾಗನಕಟ್ಟೆಯ ರತ್ನ ಆಚಾರ್ಯ ಅವರ ಮನೆಯ ಬಾವಿಗೆ ಗೂಳಿ ಆಕಸ್ಮಿಕವಾಗಿ ಬಿದ್ದಿತ್ತು. ಬಾವಿಯೊಳಗೆ ಬಿದ್ದ ಗೂಳಿ ಮೇಲೆ ಬರಲಾಗದೆ ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದರು.

ಮಾಹಿತಿ ಪಡೆದ ಕಾರ್ಕಳ ಅಗ್ನಿಶಾಮಕ ದಳದ ಅಧಿಕಾರಿ ಚಂದ್ರಶೇಖರ ಅವರ ನೇತೃತ್ವದಲ್ಲಿ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರಾದ ಗಣೇಶ್ ಆಚಾರ್ಯ ಅವರು ಹಗ್ಗದ ಸಹಾಯದಿಂದ ಬಾವಿಗೆ ಇಳಿದು ರಕ್ಷಣಾ ಕಾರ್ಯಾಚರಣೆಗೆ ಸಹಕರಿಸಿದರು.

ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರ ಜಂಟಿ ಪ್ರಯತ್ನದಿಂದ ಗೂಳಿಯನ್ನು ಸುರಕ್ಷಿತವಾಗಿ ಬಾವಿಯಿಂದ ಮೇಲಕ್ಕೆತ್ತಲಾಯಿತು. ಸಮಯೋಚಿತ ಕಾರ್ಯಾಚರಣೆಯಿಂದ ಗೂಳಿಯ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದು, ಸ್ಥಳೀಯರ ಸಹಕಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.


