ಉಡುಪಿ : ಇಂಜಿನಿಯರ್ಸ್ ಡೇ ಅಂಗವಾಗಿ ಲಯನ್ಸ್ ಕ್ಲಬ್ ಬನ್ನಾಡಿ–ವಡ್ಡರ್ಸೆ ವತಿಯಿಂದ ಕೋಟ ಮೆಸ್ಕಾಂನಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಇಂಜಿನಿಯರ್ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ತಾಂತ್ರಿಕ ಜ್ಞಾನ, ವೃತ್ತಿಪರ ಪರಿಣತಿ, ಕರ್ತವ್ಯನಿಷ್ಠೆ, ಸಮಯಪ್ರಜ್ಞೆ, ಸರಳತೆ ಹಾಗೂ ಜನಪರ ಸೇವಾ ಮನೋಭಾವದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಪ್ರತಾಪ್ ಚಂದ್ರ ಶೆಟ್ಟಿ ಅವರ ಸೇವೆಯನ್ನು ಗುರುತಿಸಿ ಈ ಗೌರವ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಬನ್ನಾಡಿ–ವಡ್ಡರ್ಸೆಯ ಅಧ್ಯಕ್ಷ ಲಯನ್ ಪ್ರಭಾಕರ ಶೆಟ್ಟಿ ಮಾತನಾಡಿ, ಇಂಜಿನಿಯರ್ಗಳು ಕೇವಲ ತಾಂತ್ರಿಕ ಕ್ಷೇತ್ರದ ವೃತ್ತಿಪರರಲ್ಲ, ಸಮಾಜದ ಮೂಲಸೌಕರ್ಯ ಹಾಗೂ ಅಭಿವೃದ್ಧಿಯ ಪ್ರಮುಖ ಶಕ್ತಿಯಾಗಿದ್ದಾರೆ. ವಿದ್ಯುತ್, ರಸ್ತೆ, ಕಟ್ಟಡ, ನೀರಾವರಿ, ಕೈಗಾರಿಕೆ ಹಾಗೂ ಸಂಪರ್ಕ ವ್ಯವಸ್ಥೆಗಳ ಅಭಿವೃದ್ಧಿಯಲ್ಲಿ ಇಂಜಿನಿಯರ್ಗಳ ಕೊಡುಗೆ ಮಹತ್ವದ್ದಾಗಿದೆ ಎಂದು ಹೇಳಿದರು.

ಕೋಟ ಮೆಸ್ಕಾಂನ ಅಸಿಸ್ಟೆಂಟ್ ಇಂಜಿನಿಯರ್ ಲಯನ್ ಹಾಲಾಡಿ ಪ್ರಶಾಂತ್ ಶೆಟ್ಟಿ ಮಾತನಾಡಿ, ಇಂಜಿನಿಯರ್ಸ್ ಡೇಯ ಮಹತ್ವ ಹಾಗೂ ಇಂಜಿನಿಯರ್ಗಳ ವೃತ್ತಿಪರ ಜವಾಬ್ದಾರಿಗಳ ಕುರಿತು ವಿವರಿಸಿದರು. ವಿದ್ಯುತ್ ಇಲಾಖೆಯಲ್ಲಿ ನಿರಂತರ ವಿದ್ಯುತ್ ಪೂರೈಕೆ, ಸಾರ್ವಜನಿಕ ಸುರಕ್ಷತೆ, ತಾಂತ್ರಿಕ ಸಮಸ್ಯೆಗಳ ಪರಿಹಾರ ಹಾಗೂ ತುರ್ತು ಸಂದರ್ಭಗಳಲ್ಲಿ ತ್ವರಿತವಾಗಿ ಸ್ಪಂದಿಸುವುದು ಸೇರಿದಂತೆ ಹಲವು ಪ್ರಮುಖ ಜವಾಬ್ದಾರಿಗಳನ್ನು ಇಂಜಿನಿಯರ್ಗಳು ನಿರ್ವಹಿಸುತ್ತಾರೆ ಎಂದರು. ಲಯನ್ ಅಡ್ವೊಕೇಟ್ ಬನ್ನಾಡಿ ಸೋಮನಾಥ ಹೆಗ್ಡೆ ಅವರು ಪ್ರತಾಪ್ ಚಂದ್ರ ಶೆಟ್ಟಿ ಅವರ ವೃತ್ತಿಪರ ಪರಿಣತಿ, ಕರ್ತವ್ಯನಿಷ್ಠೆ, ಸರಳ-ಸೌಜನ್ಯಯುತ ವ್ಯಕ್ತಿತ್ವ ಹಾಗೂ ಸೇವಾ ಮನೋಭಾವವನ್ನು ಶ್ಲಾಘಿಸಿದರು. ಲಯನ್ ಪ್ರೊ. ಕಲ್ಕಟ್ಟೆ ಚಂದ್ರಶೇಖರ್ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ತಾಂತ್ರಿಕ ಜ್ಞಾನ ಮತ್ತು ಅನುಭವದೊಂದಿಗೆ ವಿವಿಧ ಸವಾಲುಗಳನ್ನು ಸಮಚಿತ್ತದಿಂದ ನಿಭಾಯಿಸುತ್ತಿರುವ ಪ್ರತಾಪ್ ಚಂದ್ರ ಶೆಟ್ಟಿ ಅವರು ಸಹೋದ್ಯೋಗಿಗಳು ಹಾಗೂ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಅಧಿಕಾರಿಯಾಗಿದ್ದಾರೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರತಾಪ್ ಚಂದ್ರ ಶೆಟ್ಟಿ, ಲಯನ್ಸ್ ಕ್ಲಬ್ ನೀಡಿದ ಗೌರವಕ್ಕೆ ಕೃತಜ್ಞತೆ ಸಲ್ಲಿಸಿ, ಇಂತಹ ಗೌರವಗಳು ಇನ್ನಷ್ಟು ಜವಾಬ್ದಾರಿಯಿಂದ ಸೇವೆ ಸಲ್ಲಿಸಲು ಪ್ರೇರಣೆ ನೀಡುತ್ತವೆ ಎಂದರು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ, ಪ್ರಾಮಾಣಿಕತೆ ಮತ್ತು ಕರ್ತವ್ಯನಿಷ್ಠೆಯಿಂದ ಕಾರ್ಯನಿರ್ವಹಿಸುವುದು ತಮ್ಮ ಧ್ಯೇಯವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ನ ಕೋಶಾಧಿಕಾರಿ ಲಯನ್ ಉಪ್ಲಾಡಿ ಸುಗುಣಾಕರ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಲಯನ್ ವಡ್ಡರ್ಸೆ ಬಾಲಕೃಷ್ಣ ಶೆಟ್ಟಿ, ಮಾಜಿ ಅಧ್ಯಕ್ಷರಾದ ಲಯನ್ ಸುರೇಂದ್ರ ಶೆಟ್ಟಿ ಕೊಮೆ ಅಚ್ಲಾಡಿ, ಲಯನ್ ವಸಂತ ಶೆಟ್ಟಿ ಸೂರಿಬೆಟ್ಟು ಅಚ್ಲಾಡಿ, ಲಯನ್ ರಾಜೀವ್ ಶೆಟ್ಟಿ ಅಚ್ಲಾಡಿ, ಲಯನ್ ಪ್ರಶಾಂತ್ ಶೆಟ್ಟಿ ವಡ್ಡರ್ಸೆ, ಲಯನ್ ಕಾವಡಿ ಉಲ್ಲಾಸ್ ಶೆಟ್ಟಿ, ಲಯನ್ ಬೇಳೂರು ಮಹೇಶ್ಚಂದ್ರ ಶೆಟ್ಟಿ, ಮಾಜಿ ಕಾರ್ಯದರ್ಶಿಗಳಾದ ಲಯನ್ ಮಧುವನ ನಿತೀಶ್ ಆಚಾರ್ ಹಾಗೂ ಲಯನ್ ಬನ್ನಾಡಿ ಶರತ್ ಶೆಟ್ಟಿ ಸೇರಿದಂತೆ ಮೆಸ್ಕಾಂ ಸಿಬ್ಬಂದಿ ಮತ್ತು ಲಯನ್ಸ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಬನ್ನಾಡಿ–ವಡ್ಡರ್ಸೆಯ ಕಾರ್ಯದರ್ಶಿ ಲಯನ್ ಬನ್ನಾಡಿ ಸುಭಾಶ್ಚಂದ್ರ ಶೆಟ್ಟಿ ಕೆ. ವಂದಿಸಿದರು. ಕಾರ್ಯಕ್ರಮವನ್ನು ಲಯನ್ ಪ್ರೊ. ಕಲ್ಕಟ್ಟೆ ಚಂದ್ರಶೇಖರ್ ಶೆಟ್ಟಿ ನಿರ್ವಹಿಸಿದರು.


