ಉಡುಪಿ: ಪೆಟ್ರೋಲ್ ಬಂಕ್ ಆವರಣದಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ವೊಂದು ಬೆಂಕಿಗಾಹುತಿಯಾದ ಘಟನೆ ಮಣಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೆಂದೂರುಕಟ್ಟೆಯಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ. ಪೆಟ್ರೋಲ್ ಬಂಕ್ ಆವರಣದಲ್ಲಿ ನಿಲ್ಲಿಸಿದ್ದ ಬಸ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಮುಂಜಾನೆ ಬಂಕ್ ಸಿಬ್ಬಂದಿ ಬಂದು ನೋಡಿದಾಗ ಬಸ್ ಸುಟ್ಟು ಹೋಗಿರುವುದು ಕಂಡುಬಂದಿದ್ದು, ಘಟನೆಗೆ ಬೆಚ್ಚಿಬಿದ್ದಿದ್ದಾರೆ.

ಬೆಂಕಿ ಹೊತ್ತಿ ಉರಿಯುತ್ತಿದ್ದ ವೇಳೆ ಪೆಟ್ರೋಲ್ ಬಂಕ್ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಬೆಂಕಿಯನ್ನು ನಂದಿಸಿದ್ದಾರೆ. ಬಸ್ನ ಕೂದಲೆಳೆ ಅಂತರದಲ್ಲೇ ಮತ್ತೆರಡು ಖಾಸಗಿ ಬಸ್ಗಳು ಹಾಗೂ ಟೆಂಪೋ ನಿಂತಿದ್ದವು. ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಬೆಂಕಿ ಇತರ ವಾಹನಗಳಿಗೆ ಹಾಗೂ ಪೆಟ್ರೋಲ್ ಬಂಕ್ಗೆ ವ್ಯಾಪಿಸುವುದು ತಪ್ಪಿದ್ದು, ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.


