ಉಡುಪಿ : ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 16 ವರ್ಷದ ಬಾಲಕನನ್ನು ಇಂದ್ರಾಳಿ ರೈಲು ನಿಲ್ದಾಣದಲ್ಲಿ ಆರ್ಪಿಎಫ್ ಸಿಬ್ಬಂದಿ ಹಾಗೂ ರೈಲ್ವೆ ಚೈಲ್ಡ್ ಹೆಲ್ಪ್ ಡೆಸ್ಕ್ ಸಿಬ್ಬಂದಿ ರಕ್ಷಿಸಿ, ಪುನರ್ವಸತಿ ವ್ಯವಸ್ಥೆ ಕಲ್ಪಿಸಿದ್ದಾರೆ.

ಸೆ.21ರಂದು ಹಾಸನದಿಂದ ಉಡುಪಿ ಕಡೆಗೆ ಬರುತ್ತಿದ್ದ ಮುರುಡೇಶ್ವರ ಎಕ್ಸ್ಪ್ರೆಸ್ ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಬಾಲಕನನ್ನು ಇಂದ್ರಾಳಿ ರೈಲು ನಿಲ್ದಾಣದಲ್ಲಿ ಆರ್ಪಿಎಫ್ ಸಿಬ್ಬಂದಿ ಸುನಿಲ್ ಹಾಗೂ ರೈಲ್ವೆ ಚೈಲ್ಡ್ ಹೆಲ್ಪ್ ಡೆಸ್ಕ್ ಸಿಬ್ಬಂದಿ ರಮ್ಯಾ, ಪ್ರಕಾಶ್, ವಿಶಾಲ್ ಅವರು ಗುರುತಿಸಿ ರಕ್ಷಿಸಿದರು. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಸಹಕಾರ ನೀಡಿದರು.

ವಿಚಾರಣೆ ವೇಳೆ ಬಾಲಕನು ಮನೆಯವರು ಹಾಗೂ ಹಾಸ್ಟೆಲ್ ಸಿಬ್ಬಂದಿಗೆ ತಿಳಿಸದೆ ಉಡುಪಿಯತ್ತ ಪ್ರಯಾಣಿಸಿರುವುದು ತಿಳಿದುಬಂದಿದೆ. ಅಪ್ರಾಪ್ತ ಬಾಲಕನ ಭವಿಷ್ಯದ ಹಿತದೃಷ್ಟಿಯಿಂದ ಮುಂದಿನ ಕ್ರಮಕ್ಕಾಗಿ ಆತನನ್ನು ದೊಡ್ಡಣಗುಡ್ಡೆಯ ಸರ್ಕಾರಿ ಬಾಲಕರ ಬಾಲಮಂದಿರಕ್ಕೆ ಕರೆದೊಯ್ದು ತಾತ್ಕಾಲಿಕ ಪುನರ್ವಸತಿ ಕಲ್ಪಿಸಲಾಗಿದೆ.


