ಉಡುಪಿ: ವಿಶ್ವ ಸಾಗರ ದಿನಾಚರಣೆ-2026ರ ಅಂಗವಾಗಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ವತಿಯಿಂದ ಕರಾವಳಿ ಕಾವಲು ಪೊಲೀಸ್ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಜಲರಕ್ಷಣೆ ಮತ್ತು ಪುನರುಜ್ಜೀವನ ಪ್ರಮಾಣಪತ್ರ ಕೋರ್ಸ್ ಆಯೋಜಿಸಲಾಗಿತ್ತು. ತರಬೇತಿಯ ಸಮಾರೋಪ ಸಮಾರಂಭ ಮಣಿಪಾಲದ ಮರೆನಾ ಕ್ಯಾಂಪಸ್‌ನ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆಯಿತು. ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆ ಹಾಗೂ ಕರಾವಳಿ ಕಾವಲು ಪೊಲೀಸ್ ಘಟಕದ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಐಪಿಎಸ್, ಡಾ. ಆನಂದ ವೇಣುಗೋಪಾಲ್, ಚೀಫ್ ಆಪರೇಟಿಂಗ್ ಆಫೀಸರ್, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಡಾ. ಅನಿಲ್ ಕೆ. ಭಟ್, ಡೀನ್, ಕೆಎಂಸಿ ಮಣಿಪಾಲ, ಡಾ. ಪ್ರಾಸ್ಟನ್ ಮರೆ ಸಿರೂರು, ಕೋ-ಆರ್ಡಿನೇಟರ್, ಸಿಡಬ್ಲ್ಯುಎಂ, ಅಸೋಸಿಯೇಟ್ ಪ್ರೊಫೆಸರ್ ಹಾಗೂ ಕೆಎಂಸಿ ಮಣಿಪಾಲದ ತುರ್ತು ವೈದ್ಯಕೀಯ ವಿಭಾಗದ ಸಿಬ್ಬಂದಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಸಮುದ್ರ ತೀರ ಹಾಗೂ ಸಮುದ್ರದಲ್ಲಿ ಕರ್ತವ್ಯ ನಿರ್ವಹಿಸುವ ಕರಾವಳಿ ಕಾವಲು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನೀಡಿರುವ ಜಲರಕ್ಷಣೆ ತರಬೇತಿ ಅತ್ಯಂತ ಉಪಯುಕ್ತವಾಗಿದ್ದು, ಕರ್ತವ್ಯ ನಿರ್ವಹಣೆಗೆ ಅಗತ್ಯವಾದ ಕೌಶಲ್ಯವನ್ನು ಹೆಚ್ಚಿಸಲಿದೆ ಎಂದರು. ತರಬೇತಿಗಾಗಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನೀಡಿದ ಸಹಕಾರವನ್ನು ಅವರು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಡಾ. ಎಚ್.ಎಸ್. ಬಲ್ಲಾಳ್ ಮಾತನಾಡಿ, ಪೊಲೀಸ್ ಇಲಾಖೆ ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದ್ದು, ಪೊಲೀಸ್ ಇಲಾಖೆಗೆ ಸಂಸ್ಥೆಯ ವತಿಯಿಂದ ನಿರಂತರ ಸಹಕಾರ ನೀಡಲಾಗುತ್ತಿದೆ ಎಂದರು. ಪೊಲೀಸ್ ಇಲಾಖೆ ಕೂಡ ಸಂಸ್ಥೆಯ ಚಟುವಟಿಕೆಗಳಿಗೆ ಸಹಕಾರ ನೀಡುತ್ತಿದ್ದು, ಮುಂದಿನ ದಿನಗಳಲ್ಲಿಯೂ ಈ ಸಹಕಾರ ಮುಂದುವರಿಯಲಿದೆ ಎಂದು ತಿಳಿಸಿದರು. ಜಲರಕ್ಷಣೆ ತರಬೇತಿಯು ಸಾರ್ವಜನಿಕರ ಜೀವ ರಕ್ಷಣೆಯಲ್ಲಿ ಪೊಲೀಸ್ ಇಲಾಖೆಗೆ ಅತ್ಯಂತ ಸಹಕಾರಿಯಾಗಲಿದೆ ಎಂದರು.

ತರಬೇತಿ ಪೂರ್ಣಗೊಳಿಸಿದ 42 ಕರಾವಳಿ ಕಾವಲು ಪೊಲೀಸ್ ಸಿಬ್ಬಂದಿಗೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ವತಿಯಿಂದ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡುವಲ್ಲಿ ಉಪನ್ಯಾಸಕರಾದ ಕು. ಶ್ವೇತಾ ಕುಲಾಲ್ ಅವರು ಪ್ರಮುಖ ಪಾತ್ರ ವಹಿಸಿದ್ದರು. ವಿಶ್ವ ಸಾಗರ ದಿನಾಚರಣೆಯ ಅಂಗವಾಗಿ ನಡೆದ ಈ ತರಬೇತಿ ಕಾರ್ಯಕ್ರಮವು ಸಮುದ್ರ ಮತ್ತು ಕರಾವಳಿ ಪ್ರದೇಶಗಳಲ್ಲಿ ತುರ್ತು ಸಂದರ್ಭಗಳಲ್ಲಿ ಜೀವ ರಕ್ಷಣಾ ಕಾರ್ಯಾಚರಣೆ ನಡೆಸಲು ಪೊಲೀಸ್ ಸಿಬ್ಬಂದಿಯ ಸಾಮರ್ಥ್ಯ ವೃದ್ಧಿಸುವ ಉದ್ದೇಶ ಹೊಂದಿತ್ತು.



