Thursday, October 29, 2026

spot_img

ಬೆಂಗಳೂರು–ಕಾರವಾರ ವಂದೇ ಭಾರತ್ ರೈಲು ನವೆಂಬರ್ ಮೂರನೇ ವಾರದಲ್ಲಿ ಚಾಲನೆ

ಉಡುಪಿ : ಬೆಂಗಳೂರಿನಿಂದ ಮಂಗಳೂರು, ಉಡುಪಿ ಮಾರ್ಗವಾಗಿ ಕಾರವಾರ ಹಾಗೂ ಮಡಗಾಂವ್ ತಲುಪುವ ಬಹುನಿರೀಕ್ಷಿತ ವಂದೇ ಭಾರತ್ ರೈಲಿಗೆ ನವೆಂಬರ್ ಮೂರನೇ ವಾರದಲ್ಲಿ ಮಂಗಳೂರಿನಲ್ಲಿ ಚಾಲನೆ ನೀಡುವುದಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಭರವಸೆ ನೀಡಿದ್ದಾರೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ದೆಹಲಿಯ ರೈಲ್ವೆ ಭವನದಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಸಚಿವ ಸೋಮಣ್ಣ ಅವರನ್ನು ಭೇಟಿಯಾದ ಕೋಟ ಶ್ರೀನಿವಾಸ ಪೂಜಾರಿ, ಕರಾವಳಿ ಭಾಗದ ರೈಲ್ವೆ ಸಂಪರ್ಕ ಸುಧಾರಣೆಗೆ ಕೈಗೊಂಡ ಕ್ರಮಗಳಿಗಾಗಿ ಅಭಿನಂದಿಸಿದರು. ಕೊಂಕಣ ರೈಲ್ವೆ ಮಾರ್ಗದ ದ್ವಿಪಥೀಕರಣ ಹಾಗೂ ನಿಲ್ದಾಣಗಳ ಮೂಲಸೌಕರ್ಯ ಅಭಿವೃದ್ಧಿಗೆ ಆರ್ಥಿಕ ಕೊರತೆ ಅಡ್ಡಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ವಿಶೇಷ ಗಮನ ನೀಡಬೇಕು ಎಂದು ಕೋಟ ಮನವಿ ಮಾಡಿದರು.

ಈ ವಿಚಾರದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳು ಸಹಕಾರ ನೀಡುವ ಬಗ್ಗೆ ಸಮ್ಮತಿ ವ್ಯಕ್ತಪಡಿಸಿರುವುದನ್ನು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಶ್ವಿನಿ ವೈಷ್ಣವ್ ಹಾಗೂ ಸೋಮಣ್ಣ, ಕೊಂಕಣ ರೈಲ್ವೆ ವಿಲೀನದ ವಿಚಾರವನ್ನು ವಿಶೇಷವಾಗಿ ಪರಿಶೀಲಿಸುವುದಾಗಿ ತಿಳಿಸಿದ್ದಾರೆ ಎಂದು ಕೋಟ ಹೇಳಿದರು.

ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಪ್ರತಿದಿನ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಇಂಟರ್‌ಸಿಟಿ ರೈಲು ಆರಂಭಿಸಬೇಕೆಂದು ಕೋಟ ಮನವಿ ಮಾಡಿದರು. ಈ ಬೇಡಿಕೆಗೆ ಸಂಬಂಧಿಸಿದಂತೆ ಶೀಘ್ರ ಕ್ರಮ ಕೈಗೊಳ್ಳುವುದಾಗಿ ರೈಲ್ವೆ ಸಚಿವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಇದಲ್ಲದೆ, ಚಿಕ್ಕಮಗಳೂರು ಜಿಲ್ಲೆಯ ವಿವಿಧ ರೈಲು ನಿಲ್ದಾಣಗಳಲ್ಲಿ ನಡೆಯುತ್ತಿರುವ ಕೆಳಸೇತುವೆ ಹಾಗೂ ಮೇಲ್ಸೇತುವೆ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆಯೂ ಸಚಿವರಿಗೆ ಮನವಿ ಸಲ್ಲಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles