Thursday, October 29, 2026

spot_img

ಅಲ್ಪಸಂಖ್ಯಾತ ಮಕ್ಕಳ ಶಿಕ್ಷಣ, ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಿ: ಅಧಿಕಾರಿಗಳಿಗೆ ಸೂಚನೆ

ಉಡುಪಿ : ಶಿಕ್ಷಣದಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯವಾಗಲಿದ್ದು, ಗುಣಮಟ್ಟದ ಶಿಕ್ಷಣವು ಜವಾಬ್ದಾರಿಯುತ ನಾಗರಿಕರನ್ನು ರೂಪಿಸುತ್ತದೆ. ಅಲ್ಪಸಂಖ್ಯಾತ ಸಮುದಾಯದ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗದಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು. ನಿಸಾರ್ ಅಹ್ಮದ್ ಸೂಚಿಸಿದರು.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಗುಣಮಟ್ಟದ ಶಿಕ್ಷಣ ಹಾಗೂ ಅಗತ್ಯ ಮೂಲಸೌಕರ್ಯ ಒದಗಿಸಬೇಕು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲಿಸಬೇಕು. ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನ, ಬೌದ್ಧ ಮತ್ತು ಪಾರ್ಸಿ ಸಮುದಾಯಗಳ ಮಕ್ಕಳು ಶಿಕ್ಷಣದಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದರು.

ಜಿಲ್ಲೆಯ 1,522 ಅಂಗನವಾಡಿಗಳಲ್ಲಿ 155 ಅಲ್ಪಸಂಖ್ಯಾತ ಸಮುದಾಯಕ್ಕೆ ಸಂಬಂಧಿಸಿದ ಕೇಂದ್ರಗಳಿವೆ. ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಹರನ್ನು ನೇಮಿಸಲು ಕ್ರಮವಹಿಸಬೇಕು. ಅಧಿಕಾರಿಗಳು ಅಂಗನವಾಡಿಗಳಿಗೆ ಭೇಟಿ ನೀಡಿ ಮಕ್ಕಳ ಹಾಜರಾತಿ ಪರಿಶೀಲಿಸುವುದರ ಜತೆಗೆ ಬಾಣಂತಿಯರಿಗೆ ಪೌಷ್ಟಿಕ ಆಹಾರ ಸಮರ್ಪಕವಾಗಿ ತಲುಪುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಬೇಕು. ವಿದೇಶಗಳಲ್ಲಿ ಉದ್ಯೋಗ ಪಡೆಯಲು ನೆರವಾಗುವ ಓವರ್‌ಸೀಸ್ ಎಂಪ್ಲಾಯ್‌ಮೆಂಟ್ ಸೆಲ್‌ನ ಮಾಹಿತಿಯನ್ನು ವ್ಯಾಪಕವಾಗಿ ಪ್ರಚಾರಪಡಿಸಬೇಕು ಎಂದರು.

ಅಸಂಘಟಿತ ಕಾರ್ಮಿಕರನ್ನು ಇ-ಶ್ರಮ್ ಯೋಜನೆಯಡಿ ನೋಂದಾಯಿಸಲು ಜಾಗೃತಿ ಮೂಡಿಸಬೇಕು. ಕಟ್ಟಡ ಕಾರ್ಮಿಕರಿಗೆ ಶಿಬಿರಗಳ ಮೂಲಕ ಗುರುತಿನ ಚೀಟಿ ವಿತರಿಸುವುದರ ಜತೆಗೆ ಅರ್ಹರಿಗೆ ಟೂಲ್‌ಕಿಟ್‌ಗಳನ್ನು ಒದಗಿಸಬೇಕು. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 15 ವಿಶೇಷಚೇತನರ ಶಾಲೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿ, ಅಲ್ಲಿನ ವಿದ್ಯಾರ್ಥಿಗಳ ಕೌಶಲ್ಯ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಒದಗಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಈಗಾಗಲೇ 5,500 ಬೀದಿಬದಿ ವ್ಯಾಪಾರಿಗಳು ನೋಂದಾಯಿಸಿಕೊಂಡಿದ್ದು, ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಅರ್ಹರಿಗೆ ಸಾಲ ಸೌಲಭ್ಯ ದೊರೆಯುವಂತೆ ವ್ಯಾಪಕ ಪ್ರಚಾರ ನೀಡಬೇಕು. ಯೋಜನೆಯಡಿ ಹಂತ ಹಂತವಾಗಿ ₹10,000, ₹25,000 ಹಾಗೂ ₹50,000 ಸಾಲ ಪಡೆಯಲು ಅವಕಾಶವಿದೆ ಎಂದು ತಿಳಿಸಿದರು.

ಕೃಷಿ ಇಲಾಖೆಯಡಿ ಅಲ್ಪಸಂಖ್ಯಾತ ಸಮುದಾಯದವರಿಗಾಗಿ ಒಂಬತ್ತು ಯೋಜನೆಗಳು ಜಾರಿಯಲ್ಲಿವೆ. ಕೃಷಿ ಚಟುವಟಿಕೆಯಲ್ಲಿ ತೊಡಗಿರುವ 5,804 ಮಂದಿಯಲ್ಲಿ 3,339 ಮಂದಿ ಕೃಷಿಭೂಮಿ ಹೊಂದಿದ್ದಾರೆ. ಈ ಪೈಕಿ 409 ಮಂದಿ ಕೃಷಿ ಯೋಜನೆಗಳ ಪ್ರಯೋಜನ ಪಡೆದಿದ್ದಾರೆ. ಫಲಾನುಭವಿಗಳ ವಿವರ ನೀಡುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ತೋಟಗಾರಿಕೆ ಇಲಾಖೆಯಡಿ 151 ಗುರಿಗಳ ಪೈಕಿ 142 ಗುರಿ ಸಾಧಿಸಲಾಗಿದ್ದು, ಇನ್ನಷ್ಟು ಮಂದಿ ಯೋಜನೆಗಳ ಪ್ರಯೋಜನ ಪಡೆಯುವಂತೆ ಕ್ರಮವಹಿಸಬೇಕು ಎಂದರು.

ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಬ್ಯಾಂಕ್‌ಗಳ ಮೂಲಕ ದೊರೆಯುವ ಶೈಕ್ಷಣಿಕ ಸಾಲ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಜಿಲ್ಲೆಯಲ್ಲಿ ಕೋಮು ಸೌಹಾರ್ದತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಮತೀಯ ಭಾವನೆ ಕೆರಳಿಸುವ ಸಂದೇಶಗಳ ವಿರುದ್ಧ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು ಎಂದು ಪೊಲೀಸ್ ಇಲಾಖೆಗೆ ಸೂಚಿಸಿದರು. ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮಾತನಾಡಿ, 14 ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಕಡ್ಡಾಯ ಶಿಕ್ಷಣ ದೊರೆಯಬೇಕು. ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.

ಸಭೆಯಲ್ಲಿ ಆಯೋಗದ ಅಧ್ಯಕ್ಷರ ವಿಶೇಷ ಕರ್ತವ್ಯಾಧಿಕಾರಿ ಮುಜಿಬುಲ್ಲಾ ಜಫಾರಿ, ಎಎಸ್‌ಪಿ ಸುಧಾಕರ ನಾಯಕ್, ಜಿಲ್ಲಾ ಅಲ್ಪಸಂಖ್ಯಾತರ ಅಧಿಕಾರಿ ಜಿನೇಂದ್ರ ಎಂ., ಕಾರ್ಯಕ್ರಮದ ಅನುಷ್ಠಾನ ಸಮಿತಿ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles