ಉಡುಪಿ : ಎಂಐಟಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ಸಂಚಾರಕ್ಕಾಗಿ ನಡೆಸಲಾಗುತ್ತಿದ್ದ ಬ್ಯಾಟರಿ ಚಾಲಿತ ವಾಹನ ಸೇವೆಯ ಪ್ರಯಾಣಿಕರ ಶುಲ್ಕವನ್ನು ನಕಲಿ ಕ್ಯೂಆರ್ ಕೋಡ್ ಮೂಲಕ ಸಂಗ್ರಹಿಸಿ ಸುಮಾರು 12 ಲಕ್ಷ ವಂಚನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಮಣಿಪಾಲದ ಶಿವಳ್ಳಿ ಗ್ರಾಮದ ಎಂಐಟಿ ಕ್ಯಾಂಪಸ್‌ನಲ್ಲಿ ಬ್ಯಾಟರಿ ಚಾಲಿತ ವಾಹನ ಸೇವೆಯನ್ನು ನಡೆಸುತ್ತಿರುವ ಇಂಡೆಂಟಾ ಇ ಮೊಬಿಲಿಟಿ ಪ್ರೈ ಲಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಿದ್ದಮೂರ್ತಿ ಜಿ. (29), ಶಿವರಾಜ್ ನಾಯಕ್ (30), ಸುದೀಪ್ (30), ಜಿತೇಶ್ ಎಲ್. ಕಾಂಚನ್ (29), ಮುತ್ತಣ್ಣ ಅಢೀನವರ (32) ಹಾಗೂ ಎಂ.ಬಿ. ಅವಿನಾಶ್ (24) ಅವರು ಏ.1, 2026ರಿಂದ ಕಂಪನಿಗೆ ಬರಬೇಕಾಗಿದ್ದ ಪ್ರಯಾಣಿಕರ ಶುಲ್ಕವನ್ನು ಕಂಪನಿಯ ಅಧಿಕೃತ ಕ್ಯೂಆರ್ ಕೋಡ್‌ಗೆ ಪಾವತಿಯಾಗದಂತೆ ಮಾಡಿದ್ದರು ಎನ್ನಲಾಗಿದೆ. ಆರೋಪಿತರು ಪ್ರತ್ಯೇಕ ವ್ಯವಹಾರ ಖಾತೆ ತೆರೆದು ವೈಯಕ್ತಿಕ ಮರ್ಚೆಂಟ್ ಕ್ಯೂಆರ್ ಕೋಡ್ ಸೃಷ್ಟಿಸಿಕೊಂಡು, ಬ್ಯಾಟರಿ ವಾಹನದಲ್ಲಿ ಸಂಚರಿಸುವ ಪ್ರಯಾಣಿಕರಿಂದ ಆ ಕ್ಯೂಆರ್ ಕೋಡ್‌ಗೆ ಹಣ ಪಾವತಿಸುವಂತೆ ಮಾಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಮೂಲಕ ಸಂಗ್ರಹವಾದ ಹಣವನ್ನು ಮುತ್ತಣ್ಣ ಅಢೀನವರ ಅವರ ಪತ್ನಿ ಐಶ್ವರ್ಯ ಮುತ್ತಣ್ಣ ಅಢೀನವರ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡು, ಬಳಿಕ ಆರೋಪಿತರು ಹಂಚಿಕೊಂಡು ಕಂಪನಿಗೆ ವಂಚನೆ ಹಾಗೂ ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಮಣಿಪಾಲ ಪೊಲೀಸ್ ಠಾಣೆಯ ಪಿಎಸ್‌ಐ ಶಂಭುಲಿಂಗಯ್ಯ ಎಂ. ಮುಂದುವರಿಸಿದ್ದು, ಸಿದ್ದಮೂರ್ತಿ ಜಿ., ಶಿವರಾಜ್ ನಾಯಕ್, ಸುದೀಪ್, ಜಿತೇಶ್ ಕಾಂಚನ್, ಮುತ್ತಣ್ಣ ಅಢೀನವರ ಹಾಗೂ ಎಂ.ಬಿ. ಅವಿನಾಶ್ ಅವರನ್ನು ಅ.2ರಂದು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ನ್ಯಾಯಾಲಯದ ಅನುಮತಿಯೊಂದಿಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಪ್ರಕರಣದಲ್ಲಿ ಹಣದ ವಹಿವಾಟು ಹಾಗೂ ಇತರ ಆರೋಪಿಗಳ ಪಾತ್ರದ ಕುರಿತು ತನಿಖೆ ಮುಂದುವರಿದಿದೆ.


