Sunday, October 4, 2026

spot_img

ಅಟ್ಲಾಂಟಾದಲ್ಲಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಭವ್ಯ ಗುರು ಅಭಿವಂದನೆ

ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಐತಿಹಾಸಿಕ ಚತುರ್ಥ ವಿಶ್ವಗೀತಾ ಪರ್ಯಾಯವನ್ನು ಯಶಸ್ವಿಯಾಗಿ ಪೂರೈಸಿದ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಅಮೆರಿಕದ ಅಟ್ಲಾಂಟಾದಲ್ಲಿ ಭಕ್ತರಿಂದ ಭವ್ಯ ಗುರು ಅಭಿವಂದನೆ ಸಲ್ಲಿಸಲಾಯಿತು.

ಕುಟುಂಬ ಸಮೇತರಾಗಿ ಆಗಮಿಸಿದ್ದ ನೂರಾರು ಭಕ್ತರು ಶ್ರೀಪಾದರನ್ನು ಭಕ್ತಿಭಾವದಿಂದ ಸ್ವಾಗತಿಸಿ, ಪುಷ್ಪಾರ್ಚನೆ ಹಾಗೂ ಫಲಸಮರ್ಪಣೆ ಮೂಲಕ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಟ್ಲಾಂಟಾದಲ್ಲಿ ನೆಲೆಸಿರುವ ಪುತ್ತಿಗೆ ಮಠದ ಅನುಯಾಯಿಗಳು ಹಾಗೂ ಶ್ರೀಕೃಷ್ಣನ ಭಕ್ತರು ವಿಶೇಷವಾಗಿ ಭಾಗವಹಿಸಿ, ಶ್ರೀಪಾದರ ಆಶೀರ್ವಾದ ಪಡೆದರು.

ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ವ್ಯವಸ್ಥೆಗೆ ವಿಶಿಷ್ಟ ಆಯಾಮ ನೀಡಿದ ಚತುರ್ಥ ವಿಶ್ವಗೀತಾ ಪರ್ಯಾಯದ ಮೂಲಕ ಶ್ರೀಕೃಷ್ಣ ಸೇವೆ ಹಾಗೂ ಭಗವದ್ಗೀತೆಯ ಸಂದೇಶವನ್ನು ವಿಶ್ವದ ವಿವಿಧೆಡೆಗೆ ತಲುಪಿಸುವ ಪ್ರಯತ್ನ ನಡೆಸಲಾಗಿದೆ. ದೇಶ-ವಿದೇಶಗಳಲ್ಲಿರುವ ಭಕ್ತರನ್ನು ಶ್ರೀಕೃಷ್ಣ ಸೇವೆ ಮತ್ತು ಭಗವದ್ಗೀತೆಯೊಂದಿಗೆ ಬೆಸೆಯುವ ಉದ್ದೇಶದಿಂದ ವಿಶ್ವಗೀತಾ ಪರ್ಯಾಯವನ್ನು ರೂಪಿಸಲಾಗಿತ್ತು ಎಂದು ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದರು.

ಭಗವದ್ಗೀತೆಯ ತತ್ತ್ವ ಹಾಗೂ ಶ್ರೀಕೃಷ್ಣನ ಭಕ್ತಿಯನ್ನು ವಿಶ್ವದಾದ್ಯಂತ ಜನರಿಗೆ ತಲುಪಿಸುವುದರ ಜತೆಗೆ, ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ಹಾಗೂ ಹೊಸ ತಲೆಮಾರಿನ ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರೆಯ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ವಿಶ್ವಗೀತಾ ಪರ್ಯಾಯ ಮಹತ್ವದ ವೇದಿಕೆಯಾಗಿದೆ ಎಂದು ಅವರು ಹೇಳಿದರು.

ಗುರು ಅಭಿವಂದನೆ ಸಂದರ್ಭದಲ್ಲಿ ಭಕ್ತರು ಶ್ರೀಪಾದರೊಂದಿಗೆ ಸಂವಾದ ನಡೆಸಿ, ಪರ್ಯಾಯದ ವಿವಿಧ ಸೇವಾ ಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮವು ಭಕ್ತಿ, ಶ್ರದ್ಧೆ ಹಾಗೂ ಗುರುಭಕ್ತಿಯ ವಾತಾವರಣದಲ್ಲಿ ನಡೆಯಿತು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles