ಉಡುಪಿ: ದೇಶವನ್ನು ಕಣ್ತುಂಬಿಕೊಳ್ಳಬೇಕು… ಭಾರತದ ನೆಲ, ಜನಜೀವನ, ಸಂಸ್ಕೃತಿ ಹಾಗೂ ವೈವಿಧ್ಯತೆಯನ್ನು ಸ್ವತಃ ಅನುಭವಿಸಬೇಕು… ಎಂಬ ಸಂಕಲ್ಪದೊಂದಿಗೆ ಉತ್ತರ ಪ್ರದೇಶದ ಯುವಕನೊಬ್ಬ ಯಾವುದೇ ಪ್ರಾಯೋಜಕರ ನೆರವಿಲ್ಲದೆ, ಹಣದ ನಿರೀಕ್ಷೆಯಿಲ್ಲದೆ ಬರೋಬ್ಬರಿ ಒಂಬತ್ತು ತಿಂಗಳಿಗೂ ಹೆಚ್ಚು ಕಾಲದಿಂದ ಕಾಲ್ನಡಿಗೆಯಲ್ಲೇ ಭಾರತ ಸುತ್ತುವ ಅಪರೂಪದ ಸಾಹಸಯಾತ್ರೆ ಕೈಗೊಂಡಿದ್ದಾರೆ. ಉತ್ತರ ಪ್ರದೇಶದ ಆಕಾಶ್ ಶುಕ್ಲಾ ಅವರ ಈ ಪಾದಯಾತ್ರೆ ಇದೀಗ ಕರ್ನಾಟಕವನ್ನು ಪ್ರವೇಶಿಸಿದ್ದು, ಉಡುಪಿಗೂ ಕಾಲಿಟ್ಟಿದೆ. ದೇಶದ ವಿವಿಧ ರಾಜ್ಯಗಳು ಹಾಗೂ ಜಿಲ್ಲೆಗಳ ಮೂಲಕ ಕಾಲ್ನಡಿಗೆಯಲ್ಲಿ ಸಾಗುತ್ತಿರುವ ಅವರು ಉಡುಪಿಗೆ ಆಗಮಿಸಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು. ಬಳಿಕ ಅನ್ನಪ್ರಸಾದ ಸ್ವೀಕರಿಸಿ ಧರ್ಮಸ್ಥಳದತ್ತ ತಮ್ಮ ಮುಂದಿನ ಪಯಣವನ್ನು ಮುಂದುವರಿಸಿದರು.

ಕನ್ಯಾಕುಮಾರಿಯಿಂದ ತಮ್ಮ ಯಾತ್ರೆ ಆರಂಭಿಸಿರುವ ಆಕಾಶ್ ಶುಕ್ಲಾ, ದೇಶದ ಉತ್ತರ ತುದಿಯಾದ ಕಾಶ್ಮೀರದವರೆಗೆ ಕಾಲ್ನಡಿಗೆಯಲ್ಲಿ ಸಾಗುವ ಸಂಕಲ್ಪ ಹೊಂದಿದ್ದಾರೆ. ಈ ಸಾಹಸಯಾತ್ರೆಯಲ್ಲಿ ದೇಶದ ಒಟ್ಟು 28 ರಾಜ್ಯಗಳು ಹಾಗೂ 806 ಜಿಲ್ಲೆಗಳನ್ನು ಕಾಲ್ನಡಿಗೆಯಲ್ಲೇ ಕ್ರಮಿಸುವ ಗುರಿಯನ್ನು ಅವರು ಹೊಂದಿದ್ದಾರೆ. ಯಾತ್ರೆಯ ಹಿಂದೆ ಯಾವುದೇ ವೈಯಕ್ತಿಕ ಲಾಭದ ಉದ್ದೇಶವಿಲ್ಲ. ದೇಶವನ್ನು ಪುಸ್ತಕಗಳಲ್ಲಿ ಓದುವುದಕ್ಕಿಂತ ಅದರ ನೆಲದ ಮೇಲೆ ಹೆಜ್ಜೆ ಹಾಕಿ, ಅಲ್ಲಿನ ಜನರನ್ನು ಭೇಟಿಯಾಗಿ, ಅವರ ಜೀವನಶೈಲಿ, ಭಾಷೆ, ಆಹಾರ ಪದ್ಧತಿ, ಸಂಪ್ರದಾಯ, ಸಂಸ್ಕೃತಿ ಮತ್ತು ವೈವಿಧ್ಯತೆಯನ್ನು ಅರಿಯಬೇಕು ಎಂಬುದು ಅವರ ಆಶಯ.

ಕೈಯಲ್ಲಿ ದೊಡ್ಡ ಮೊತ್ತದ ಹಣವಿಲ್ಲ, ಹಿಂದೆ ಯಾವುದೇ ಪ್ರಾಯೋಜಕರ ಪಡೆ ಇಲ್ಲ ಆದರೂ ಆತ್ಮವಿಶ್ವಾಸ ಮತ್ತು ಸಂಕಲ್ಪವನ್ನೇ ಬಂಡವಾಳವಾಗಿಸಿಕೊಂಡು ಆಕಾಶ್ ತಮ್ಮ ಪಯಣ ಮುಂದುವರಿಸುತ್ತಿದ್ದಾರೆ. ದಾರಿಯಲ್ಲಿ ಎದುರಾಗುವ ಜನರ ಆತಿಥ್ಯ, ಸಹಕಾರ ಹಾಗೂ ಪ್ರಕೃತಿಯನ್ನೇ ತಮ್ಮ ಯಾತ್ರೆಯ ಸಂಗಾತಿಗಳನ್ನಾಗಿಸಿಕೊಂಡು ಹೆಜ್ಜೆ ಹಾಕುತ್ತಿದ್ದಾರೆ.

ಕರ್ನಾಟಕ ಪ್ರವೇಶಿಸಿದ ಬಳಿಕ ಕರಾವಳಿಯ ಸಾಂಸ್ಕೃತಿಕ ವೈಭವವನ್ನು ಕಣ್ತುಂಬಿಕೊಳ್ಳುತ್ತಿರುವ ಆಕಾಶ್, ಉಡುಪಿಯಲ್ಲಿ ಶ್ರೀಕೃಷ್ಣನ ದರ್ಶನ ಪಡೆದು ಅನ್ನಪ್ರಸಾದ ಸ್ವೀಕರಿಸಿರುವುದು ಯಾತ್ರೆಯ ಮತ್ತೊಂದು ಸ್ಮರಣೀಯ ಘಟ್ಟವಾಗಿದೆ.

ಇಲ್ಲಿಂದ ಧರ್ಮಸ್ಥಳದತ್ತ ಹೆಜ್ಜೆ ಹಾಕಿರುವ ಅವರು, ಮುಂದಿನ ದಿನಗಳಲ್ಲಿ ಕರ್ನಾಟಕದ ವಿವಿಧ ಭಾಗಗಳನ್ನು ಸುತ್ತಿ ತಮ್ಮ ಮಹತ್ವಾಕಾಂಕ್ಷೆಯ ಪಾದಯಾತ್ರೆಯನ್ನು ಮುಂದುವರಿಸಲಿದ್ದಾರೆ. ಭಾರತವನ್ನು ಸುತ್ತುವುದಷ್ಟೇ ಅಲ್ಲ, ಭಾರತವನ್ನು ಅರಿಯಬೇಕು ಎಂಬ ಸಂಕಲ್ಪದೊಂದಿಗೆ ಸಾಗುತ್ತಿರುವ ಆಕಾಶ್ ಶುಕ್ಲಾ ಅವರ ಈ ಅಪರೂಪದ ಪಾದಯಾತ್ರೆ ಇದೀಗ ಕರಾವಳಿಯಲ್ಲೂ ಕುತೂಹಲ ಮೂಡಿಸಿದೆ.


