Sunday, October 4, 2026

spot_img

ಮಲ್ಪೆಯಲ್ಲಿ ಗುಜರಿ ಸಂಗ್ರಹಿಸುತ್ತಿದ್ದ ವ್ಯಕ್ತಿಯ ಕೊಲೆ: ಹುಬ್ಬಳ್ಳಿ ಹೊರವಲಯದಲ್ಲಿ ಆರೋಪಿ ಬಂಧನ

ಉಡುಪಿ : ಬಂದರು ಪ್ರದೇಶದಲ್ಲಿ ಗುಜರಿ ವಸ್ತುಗಳನ್ನು ಸಂಗ್ರಹಿಸಿಕೊಂಡು ಜೀವನ ಸಾಗಿಸುತ್ತಿದ್ದ ಆಂಧ್ರಪ್ರದೇಶ ಮೂಲದ ವ್ಯಕ್ತಿಯನ್ನು ಕುತ್ತಿಗೆಗೆ ಇರಿದು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ. ಮೃತರನ್ನು ಆಂಧ್ರಪ್ರದೇಶ ಮೂಲದ ಪರಮೇಶಿ ಅಲಿಯಾಸ್ ಪರಮ್‌ವೇಲಿ (55) ಎಂದು ಗುರುತಿಸಲಾಗಿದೆ. ಕಳೆದ ಸುಮಾರು ಮೂರು ವರ್ಷಗಳಿಂದ ಮಲ್ಪೆ ಬಂದರು ಪ್ರದೇಶದಲ್ಲಿ ಗುಜರಿ ವಸ್ತುಗಳನ್ನು ಸಂಗ್ರಹಿಸುತ್ತಿದ್ದ ಅವರು, ಪ್ರತಿದಿನ ಮಧ್ಯಾಹ್ನ ಹಾಗೂ ರಾತ್ರಿ ವೇಳೆ ಮಲ್ಪೆ ಬಾಬುತೋಟ ಧಕ್ಕೆಯ ಬಳಿಯ ಖಾಲಿ ಜಾಗದಲ್ಲಿ ಪ್ಲಾಸ್ಟಿಕ್ ಗೋಣಿ ಚೀಲ ಹಾಸಿಕೊಂಡು ಮಲಗುತ್ತಿದ್ದರು ಎನ್ನಲಾಗಿದೆ. ಮಲ್ಪೆ ಮರೈನ್ ಏಜೆನ್ಸಿಯ ಪಕ್ಕದಲ್ಲಿರುವ ಮೀನು ಬಾಕ್ಸ್‌ಗಳನ್ನು ಸಂಗ್ರಹಿಸುವ ಗೋಡೌನ್‌ಗಳ ನಡುವೆ ಸುಮಾರು 10 ಅಡಿ ಅಗಲದ ಖಾಲಿ ಜಾಗವಿದ್ದು, ಬೋಟ್‌ಗೆ ತೆರಳುವ ಮೀನುಗಾರರು ಅಲ್ಲಿ ತಮ್ಮ ಬೈಕ್‌ಗಳನ್ನು ನಿಲ್ಲಿಸುತ್ತಿದ್ದರು. ಇದೇ ಸ್ಥಳದಲ್ಲಿ ಪರಮೇಶಿ ಸೇರಿದಂತೆ ಕೆಲವರು ರಾತ್ರಿ ವೇಳೆ ಮಲಗುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸೆ.28ರಂದು ಸಂಜೆ ಸುಮಾರು 7 ಗಂಟೆಗೆ ಏಜೆನ್ಸಿಗೆ ಶಟರ್ ಹಾಕಿ ತೆರಳುವ ವೇಳೆ ಪರಮೇಶಿ ಖಾಲಿ ಜಾಗದಲ್ಲಿ ಕುಳಿತಿರುವುದನ್ನು ಏಜೆನ್ಸಿಯ ಮಾಲೀಕ ರಿಷಭ್ ಗಮನಿಸಿದ್ದರು. ಮರುದಿನ ಬೆಳಗ್ಗೆ 8.30ರ ಸುಮಾರಿಗೆ ಏಜೆನ್ಸಿಗೆ ಬಂದಾಗ, ಪರಮೇಶಿ ಗೋಣಿ ಚೀಲದ ಮೇಲೆ ರಕ್ತದ ಮಡುವಿನಲ್ಲಿ ಅಡ್ಡವಾಗಿ ಬಿದ್ದಿರುವುದು ಕಂಡುಬಂದಿದೆ. ಅವರ ಕುತ್ತಿಗೆಯ ಭಾಗದಿಂದ ರಕ್ತಸ್ರಾವವಾಗಿದ್ದು, ನೆಲದ ಮೇಲೂ ರಕ್ತದ ಗುರುತುಗಳು ಕಂಡುಬಂದಿದ್ದವು. ಸೆ.28ರ ಸಂಜೆ 7ರಿಂದ ಸೆ.29ರ ಬೆಳಗ್ಗೆ 8.30ರ ನಡುವಿನ ಅವಧಿಯಲ್ಲಿ ದುಷ್ಕರ್ಮಿಗಳು ಯಾವುದೋ ದ್ವೇಷದ ಹಿನ್ನೆಲೆಯಲ್ಲಿ ಪರಮೇಶಿಯ ಕುತ್ತಿಗೆಗೆ ಆಯುಧದಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು. ಹಾಗೂ ಮಲ್ಪೆ ವೃತ್ತನಿರೀಕ್ಷಕ ರಾಮಚಂದ್ರ ನಾಯಕ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ, ಹುಬ್ಬಳ್ಳಿ ಹೊರವಲಯದಲ್ಲಿ ಆರೋಗ್ಯ ದಾಸ್ ಅಲಿಯಾಸ್ ಕಾಮಿ (55), ಹುಬ್ಬಳ್ಳಿ ಎಂಬಾತನನ್ನು ಬಂಧಿಸಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಅನೀಲ್ ಕುಮಾರ್ ಡಿ. ನೇತೃತ್ವದಲ್ಲಿ ಹೆಡ್ ಕಾನ್‌ಸ್ಟೆಬಲ್‌ಗಳಾದ ವಿಶ್ವನಾಥ, ಆದರ್ಶ ಹಾಗೂ ಪೊಲೀಸ್ ಕಾನ್‌ಸ್ಟೆಬಲ್ ಕುಬೇರ ಅವರನ್ನೊಳಗೊಂಡ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು. ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles