ಉಡುಪಿ : ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಪಾಂಡೇಶ್ವರ ಹಾಗೂ ಐರೋಡಿ ವ್ಯಾಪ್ತಿಯ ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರನ್ನು ಗೌರವಿಸುವ ‘ಅಂಗನವಾಡಿ ಉತ್ಸವ’ ಕಾರ್ಯಕ್ರಮ ನಡೆಯಿತು. ಪಾಂಡೇಶ್ವರ ವ್ಯಾಪ್ತಿಯ ಆರು ಅಂಗನವಾಡಿಗಳು ಹಾಗೂ ಐರೋಡಿ ವ್ಯಾಪ್ತಿಯ ನಾಲ್ಕು ಅಂಗನವಾಡಿಗಳಲ್ಲಿ ಪ್ರತ್ಯೇಕವಾಗಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸೇವೆಯನ್ನು ಗುರುತಿಸಿ ಗೌರವ ಸಲ್ಲಿಸಲಾಯಿತು.

ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಹಾಗೂ ದೇಶದ ಪ್ರಧಾನಿಯಾಗಿ 25 ವರ್ಷಗಳ ಸಾರ್ವಜನಿಕ ಸೇವೆಯನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ, ಪಕ್ಷದ ಆಶಯದಂತೆ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಆಯೋಜಕರು ತಿಳಿಸಿದರು.

ಅಂಗನವಾಡಿ ಕೇಂದ್ರಗಳು ಮಕ್ಕಳ ಆರಂಭಿಕ ಶಿಕ್ಷಣ, ಪೌಷ್ಟಿಕತೆ ಹಾಗೂ ಆರೋಗ್ಯ ಕಾಳಜಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿನ ಮಕ್ಕಳ ಬೆಳವಣಿಗೆಗೆ ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರ ಸೇವೆ ಮಹತ್ವದ್ದಾಗಿದೆ. ಅವರ ಸೇವೆಯನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಅಂಗನವಾಡಿ ಉತ್ಸವವನ್ನು ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಜ್ಯೋತಿ ಉದಯ್ ಕುಮಾರ್, ರಾಜ್ಯ ಒಬಿಸಿ ಮೋರ್ಚಾದ ಉಪಾಧ್ಯಕ್ಷ ವಿಠ್ಠಲ್ ಪೂಜಾರಿ ಐರೋಡಿ, ಕೋಟ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಕುಂದರ್ ಐರೋಡಿ, ಪಾಂಡೇಶ್ವರ ಹಾಗೂ ಐರೋಡಿ ಬಿಜೆಪಿ ಪ್ರಮುಖರು, ಕಾರ್ಯಕರ್ತರು, ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರು ಉಪಸ್ಥಿತರಿದ್ದರು.


