ಉಡುಪಿ: ಉಡುಪಿ ಸಮೀಪದ ಅಲೆವೂರು, ಕೆಮ್ತೂರು ಹಾಗೂ ಮಣಿಪಾಲದ ದುಗ್ಲಿ ಪರಿಸರದಲ್ಲಿರುವ ಬಾಳೆಹಣ್ಣು ದಾಸ್ತಾನು ಕೇಂದ್ರಗಳ ಮೇಲೆ ಅಧಿಕಾರಿಗಳು ಗುರುವಾರ ಮುಂಜಾನೆ ಏಕಕಾಲದಲ್ಲಿ ಧಿಡೀರ್ ದಾಳಿ ನಡೆಸಿದರು.

ಅಸಿಸ್ಟೆಂಟ್ ಕಮಿಷನರ್ ರಶ್ಮಿ ಎಸ್.ಆರ್. ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ರಖಂ ವ್ಯಾಪಾರಸ್ಥರು ಮತ್ತು ದಾಸ್ತಾನುದಾರರ ಗೋದಾಮುಗಳನ್ನು ಪರಿಶೀಲಿಸಿತು. ಈ ವೇಳೆ ಬಾಳೆಹಣ್ಣುಗಳನ್ನು ಕೃತಕವಾಗಿ ಹಣ್ಣಾಗಿಸಲು ಬಳಸುತ್ತಿದ್ದ ಆರೋಗ್ಯಕ್ಕೆ ಹಾನಿಕಾರಕ ರಾಸಾಯನಿಕಗಳು, ಕೃತಕ ಬಣ್ಣ ನೀಡುವ ವಸ್ತುಗಳು ಹಾಗೂ ಅವುಗಳ ಬಳಕೆಗೆ ಉಪಯೋಗಿಸುತ್ತಿದ್ದ ಪರಿಕರಗಳನ್ನು ಅಧಿಕಾರಿಗಳು ವಶಪಡಿಸಿಕೊಂಡರು.

ನಿಷೇಧಿತ ಹಾಗೂ ಹಾನಿಕಾರಕ ರಾಸಾಯನಿಕ ಬಳಸಿ ಬಾಳೆಹಣ್ಣು ಹಣ್ಣಾಗಿಸುತ್ತಿದ್ದ ಆರೋಪದಡಿ ಹಲವು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೃತ್ಯಕ್ಕೆ ಬಳಸುತ್ತಿದ್ದ ವಾಹನಗಳನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಬಾಳೆಹಣ್ಣು ಸೇರಿದಂತೆ ಹಣ್ಣುಗಳನ್ನು ಕೃತಕವಾಗಿ ಹಣ್ಣಾಗಿಸಲು ಹಾನಿಕಾರಕ ರಾಸಾಯನಿಕ ಬಳಕೆ ಮಾಡುವುದು ಗ್ರಾಹಕರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಅಧಿಕಾರಿಗಳ ದಾಳಿ ಮಹತ್ವ ಪಡೆದುಕೊಂಡಿದೆ.



