ಉಡುಪಿ: ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಮಹಿಳೆಯೊಬ್ಬರಿಗೆ ಲಿಂಕ್ ಕಳುಹಿಸಿ ಯೋನೋ ಆ್ಯಪ್ ಮೂಲಕ ರೂ 4 ಲಕ್ಷ ವರ್ಗಾವಣೆ ಮಾಡಿಸಿಕೊಂಡು ವಂಚಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಕೇರಳ ಮೂಲದ ಶ್ರುತಿ ವಿ. (37) ಅವರು ಉಡುಪಿಯಲ್ಲಿ ಜಾಗ ಖರೀದಿಸಲು ಬಂದಿದ್ದು, ಈ ಸಂಬಂಧ ಕಟಪಾಡಿಯ ರಮಾನಂದ ಶೆಟ್ಟಿ ಅವರಿಗೆ ಮೂರು ಚೆಕ್‌ಗಳನ್ನು ನೀಡಿದ್ದರು. ಚೆಕ್‌ಗಳನ್ನು ಪಾಸ್ ಮಾಡುವ ಕುರಿತು ಮಾಹಿತಿ ಪಡೆಯಲು ಗೂಗಲ್‌ನಲ್ಲಿ ಬ್ಯಾಂಕ್‌ನ ಸಂಪರ್ಕ ಸಂಖ್ಯೆ ಹುಡುಕಿದ್ದಾರೆ.

ಗೂಗಲ್‌ನಲ್ಲಿ ದೊರೆತ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ, ಕರೆ ಸ್ವೀಕರಿಸಿದ ವ್ಯಕ್ತಿ ತಾನು ಬ್ಯಾಂಕ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ಶ್ರುತಿ ಅವರಿಗೆ ಲಿಂಕ್‌ವೊಂದನ್ನು ಕಳುಹಿಸಿ ಅದನ್ನು ತೆರೆಯುವಂತೆ ತಿಳಿಸಿ, ಯೋನೋ ಆ್ಯಪ್ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಿದ್ದಾನೆ ಎನ್ನಲಾಗಿದೆ.

ಆರೋಪಿಯ ಮಾತನ್ನು ನಂಬಿದ ಶ್ರುತಿ ಅವರು ರೂ 4 ಲಕ್ಷ ಮೊತ್ತವನ್ನು ಪ್ರೊಸೀಡ್ ಮಾಡಿದ್ದು, ತಕ್ಷಣವೇ ಅವರ ಬ್ಯಾಂಕ್ ಖಾತೆಯಿಂದ ರೂ 4 ಲಕ್ಷ ಹಣ ವರ್ಗಾವಣೆಯಾಗಿದೆ. ಹಣ ವರ್ಗಾವಣೆಯಾದ ಬಳಿಕ ಅನುಮಾನಗೊಂಡ ಅವರು ಎಸ್‌ಬಿಐ ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ, ತಾವು ಆನ್‌ಲೈನ್ ವಂಚನೆಗೆ ಒಳಗಾಗಿರುವುದು ತಿಳಿದುಬಂದಿದೆ. ಸೈಬರ್ ವಂಚಕರು ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿ ಲಿಂಕ್ ಕಳುಹಿಸುವ ಮೂಲಕ ಹಣ ವಂಚಿಸಿರುವುದಾಗಿ ಶ್ರುತಿ ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


