Tuesday, July 28, 2026

spot_img

ಕಾಂಗ್ರೆಸ್ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ; ರಾಹುಲ್ ಗಾಂಧಿ, ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಯಶ್‌ಪಾಲ್ ಸುವರ್ಣ ವಾಗ್ದಾಳಿ

ಉಡುಪಿ  : ಕಾಕ್ರೋಚ್ ಪಾರ್ಟಿ ಹಾಗೂ ಅದರ ಬೆಂಬಲಿಗ ಕಾಂಗ್ರೆಸ್ ಪಕ್ಷ ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿದೆ ಎಂದು ಆರೋಪಿಸಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಜಟ್ಕಾ ಬಸ್ ನಿಲ್ದಾಣದ ಬಳಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಯಿತು.

 ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿಗೆ ಯಾವುದೇ ಸ್ಪಷ್ಟ ರಾಜಕೀಯ ನಿಲುವಿಲ್ಲ. ಕೆಲವರನ್ನು ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೋರಾಟ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಇತ್ತೀಚೆಗೆ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರಲ್ಲಿ ಶೇ.80ರಷ್ಟು ಮಂದಿ ವಿದ್ಯಾರ್ಥಿಗಳೇ ಅಲ್ಲ. ಅವರ ಹಿನ್ನೆಲೆ ಪರಿಶೀಲಿಸಿದರೆ ಸತ್ಯ ಹೊರಬರಲಿದೆ ಎಂದು ಹೇಳಿದ ಅವರು, ಕಳೆದ ಮೂರು ದಿನಗಳ ಬೆಳವಣಿಗೆಯಿಂದ ಯಾರು ದೇಶಪ್ರೇಮಿಗಳು, ಯಾರು ದೇಶದ್ರೋಹಿಗಳು ಎಂಬುದು ಬಹಿರಂಗವಾಗಿದೆ ಎಂದು ಹೇಳಿದರು.

ಮಣಿಪಾಲ ಶಿಕ್ಷಣ ಸಂಸ್ಥೆಗಳ ಬಗ್ಗೆ ನಮಗೆ ಗೌರವವಿದೆ. ಆದರೆ ಅಲ್ಲಿನ ವಿದ್ಯಾರ್ಥಿಗಳಲ್ಲಿ ವಿಷಬೀಜ ಬಿತ್ತುವ ಕೆಲಸ ನಡೆಯುತ್ತಿದೆ. ವಿದ್ಯಾರ್ಥಿಗಳ ಹೋರಾಟಕ್ಕೆ ಕೆಲ ಪ್ರಮುಖ ವ್ಯಕ್ತಿಗಳ ಬೆಂಬಲವೂ ಇದೆ ಎಂಬ ಮಾಹಿತಿ ಇದ್ದು, ಮುಂದಿನ ದಿನಗಳಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ವಿದ್ಯಾರ್ಥಿಗಳ ಪ್ರತಿಭಟನೆಗೆ ಸಂಬಂಧಿಸಿದಂತೆ ಪೊಲೀಸರು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಅವರು, ಇದು ಕೇವಲ ಪ್ರತಿಭಟನೆ ಅಲ್ಲ, ಕೊನೆಯ ಎಚ್ಚರಿಕೆ ಎಂದು ಹೇಳಿದರು.

ಈ ವೇಳೆ ಕಲಾವಿದರ ಮೂಲಕವೂ ತಪ್ಪು ವಿಚಾರಧಾರೆ ಹರಡುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಯಶ್‌ಪಾಲ್ ಸುವರ್ಣ, ನಟ ಪ್ರಕಾಶ್ ರಾಜ್ ಅವರೇ ಉಡುಪಿಗೆ ಬಂದು ಅಧಿಕ ಪ್ರಸಂಗ ಮಾಡುವುದು ನಿಲ್ಲಿಸಿ, ಇಲ್ಲದಿದ್ದರೆ ನೀವು ಮೀನುಗಳಿಗೆ ಆಹಾರವಾಗಬಹುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಹಾಗೂ ಸಿಜೆಪಿ ವಿರುದ್ಧ ಬಿಜೆಪಿ ಮುಖಂಡರು ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಸರ್ಕಾರದ ನೀತಿಗಳನ್ನು ಖಂಡಿಸಿ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಈ ವೇಳೆ ಸಾಂಕೇತಿಕವಾಗಿ ಕಾಕ್ರೋಚ್‌ಗಳ ವಿರುದ್ಧ ಹಿಟ್ ಸಿಂಪಡಿಸುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಶಾಸಕರಾದ ವಿ. ಸುನಿಲ್ ಕುಮಾರ್, ಯಶ್‌ಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಗುರುರಾಜ್ ಗಂಟಿಹೊಳೆ ಭಾಗವಹಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಉಡುಪಿ ಜಿಲ್ಲಾ ಬಿಜೆಪಿಯ ವಿವಿಧ ಮೋರ್ಚಾಗಳು, ಪ್ರಕೋಷ್ಠಗಳು, ಮಂಡಲಗಳ ಪದಾಧಿಕಾರಿಗಳು ಹಾಗೂ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles