Tuesday, July 28, 2026

spot_img

ಕೆಪಿಎಸ್ಸಿ ಹಗರಣದಿಂದ ಯುವಕರಲ್ಲಿ ಆತಂಕ, ಸರ್ಕಾರ ತಕ್ಷಣ ವಿಶ್ವಾಸ ಮೂಡಿಸಲಿ : ವಿ. ಸುನಿಲ್ ಕುಮಾರ್

ಉಡುಪಿ : ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರತಿದಿನ ಹೊಸ ಹೊಸ ಹಗರಣಗಳು ಬೆಳಕಿಗೆ ಬರುತ್ತಿರುವುದು ರಾಜ್ಯದ ಯುವಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ ಎಂದು ಮಾಜಿ ಸಚಿವ ಹಾಗೂ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಆರೋಪಿಸಿದರು. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಎಸ್ಸಿ ಅಧ್ಯಕ್ಷರೇ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದು, ಕೋಟ್ಯಾಂತರ ರೂಪಾಯಿ ಹಣ ಪಡೆದಿರುವ ವಿಚಾರ ಧ್ವನಿಮುದ್ರಿಕೆಗಳ ಮೂಲಕ ಬಹಿರಂಗವಾಗಿದೆ ಎಂದು ಹೇಳಿದರು.

ಈ ವಿಚಾರವನ್ನು ತಾವು ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಚರ್ಚೆಗೆ ತಂದಿದ್ದರೂ, ಸರ್ಕಾರ ಯಾವುದೇ ಸುಧಾರಣಾ ಕ್ರಮ ಕೈಗೊಂಡಿಲ್ಲ ಎಂದು ದೂರಿದ ಅವರು, ಸಾವಿರಾರು ನೇಮಕಾತಿ ಪ್ರಕ್ರಿಯೆಗಳು ನಡೆಯಲಿರುವ ಈ ಸಂದರ್ಭದಲ್ಲಿ ಇಂತಹ ಬೆಳವಣಿಗೆಗಳು ಅಭ್ಯರ್ಥಿಗಳಲ್ಲಿ ಅನುಮಾನ ಹಾಗೂ ಆತಂಕ ಹುಟ್ಟಿಸಿವೆ ಎಂದರು. ಕೆಪಿಎಸ್ಸಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಸರ್ಕಾರ ಮೌನ ವಹಿಸಿರುವುದು ಸರ್ಕಾರವೂ ಇದರಲ್ಲಿ ಪಾಲುದಾರ ಎಂಬ ಅನುಮಾನಕ್ಕೆ ಕಾರಣವಾಗಿದೆ. ಮುಂದಿನ ಎಲ್ಲಾ ಆಯ್ಕೆ ಪ್ರಕ್ರಿಯೆಗಳ ಮೇಲೂ ಅಭ್ಯರ್ಥಿಗಳು ಅನುಮಾನದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಕೂಡಲೇ ಯುವಕರಲ್ಲಿ ವಿಶ್ವಾಸ ಮೂಡಿಸುವ ಹೇಳಿಕೆ ನೀಡಬೇಕು ಎಂದು ಆಗ್ರಹಿಸಿದರು.

ಮಾಜಿ ಸಚಿವ ಸಿ.ಟಿ. ರವಿ ಅವರಿಗೆ ನೋಟಿಸ್ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುನಿಲ್ ಕುಮಾರ್, ರಾಜ್ಯದಲ್ಲಿ ಕೊಲೆ, ದರೋಡೆ ಹಾಗೂ ಪೊಲೀಸರ ಮೇಲಿನ ಹಲ್ಲೆಗಳಂತಹ ಗಂಭೀರ ಪ್ರಕರಣಗಳಿದ್ದರೂ ಗೃಹ ಇಲಾಖೆ ಫೇಸ್‌ಬುಕ್ ಪೋಸ್ಟ್ ಹಾಗೂ ಭಾಷಣಗಳನ್ನು ಹುಡುಕುವುದರಲ್ಲೇ ನಿರತವಾಗಿದೆ ಎಂದು ಟೀಕಿಸಿದರು. ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕಿದರೂ ಕ್ರಮ ಕೈಗೊಳ್ಳುವುದಿಲ್ಲ. ಬಿಜೆಪಿ ಹಾಗೂ ಹಿಂದೂ ಸಂಘಟನೆಗಳನ್ನು ಮಾತ್ರ ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಸಮಾನವಾಗಿರಬೇಕು. ಪ್ರಚೋದನೆ ನೀಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು. ಲೋಕಸಭೆ ಅಧಿವೇಶನ ಕುರಿತು ಮಾತನಾಡಿದ ಅವರು, ಕಾಂಗ್ರೆಸ್‌ಗೆ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನ ಹಾಗೂ ಸಂಸತ್ತಿನ ಚರ್ಚೆಗಳ ಮೇಲೆ ನಂಬಿಕೆ ಇಲ್ಲ ಎಂದು ಆರೋಪಿಸಿದರು. ಸಂಸತ್ತಿನ ಚರ್ಚೆಯಲ್ಲಿ ಪಾಲ್ಗೊಂಡರೆ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಆದರೆ ಚರ್ಚೆ ಬಿಟ್ಟು ನಿರಂತರ ಚಳುವಳಿ ನಡೆಸುವುದರಿಂದ ಪ್ರಯೋಜನವಿಲ್ಲ. ಕಾನೂನು ರೂಪಿಸುವ ಜವಾಬ್ದಾರಿ ನಮ್ಮದಾಗಿದ್ದು, ದೇಶಕ್ಕೆ ಅಗತ್ಯವಾದ ಉತ್ತಮ ಕಾನೂನುಗಳನ್ನು ತರಲಾಗುವುದು ಎಂದು ಹೇಳಿದರು. ಇ-20 ಪೆಟ್ರೋಲ್ ವಿರುದ್ಧದ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಅವರು, ನ್ಯಾಯಸಮ್ಮತ ಬೇಡಿಕೆಗಳ ಕುರಿತು ಸರ್ಕಾರ ಚರ್ಚೆಗೆ ಸಿದ್ಧವಿದೆ. ಆದರೆ ಚಳುವಳಿ ಹೆಸರಿನಲ್ಲಿ ಅರಾಜಕತೆ, ಸೈನಿಕರ ಮೇಲೆ ಕಲ್ಲುತೂರಾಟ ಅಥವಾ ಪೊಲೀಸರ ಮೇಲೆ ಹಲ್ಲೆಯನ್ನು ಸಹಿಸಲಾಗುವುದಿಲ್ಲ ಎಂದು ಹೇಳಿದರು.

ಪಡಿತರ ಅಕ್ಕಿ ಕಾಳಸಂತೆಯಲ್ಲಿ ಬಿಜೆಪಿ ನಾಯಕರು ಭಾಗಿಯಾಗಿದ್ದಾರೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಸಂಪೂರ್ಣ ಮಾಹಿತಿ ಹೊರಬರಲಿ. ತಪ್ಪಿತಸ್ಥರು ಯಾರು ಎಂಬುದು ಸ್ಪಷ್ಟವಾದರೆ ನಾವು ಯಾರನ್ನೂ ಸಮರ್ಥಿಸಿಕೊಳ್ಳುವುದಿಲ್ಲ ಎಂದು ಹೇಳಿದರು. ಕಾಳಸಂತೆ ಕುರಿತು ಆಯುಕ್ತರು ಈಗಾಗಲೇ ವರದಿ ಸಲ್ಲಿಸಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ರಾಜ್ಯದಲ್ಲಿ ಬರ ಪರಿಸ್ಥಿತಿ ಅಧ್ಯಯನಕ್ಕಾಗಿ ಹಾಸನ, ಚಿಕ್ಕಮಗಳೂರು ಹಾಗೂ ಶೃಂಗೇರಿ ಭಾಗಗಳಿಗೆ ಪ್ರವಾಸ ಕೈಗೊಳ್ಳುತ್ತಿರುವುದಾಗಿ ತಿಳಿಸಿದ ಸುನಿಲ್ ಕುಮಾರ್, 2023ರ ಬಳಿಕ ಉಡುಪಿ ಹಾಗೂ ಮಂಗಳೂರಿಗೆ ಪ್ರಾಕೃತಿಕ ವಿಕೋಪ ಪರಿಹಾರಕ್ಕೆ ರಾಜ್ಯ ಸರ್ಕಾರ ಸಮರ್ಪಕ ಅನುದಾನ ನೀಡಿಲ್ಲ ಎಂದು ಆರೋಪಿಸಿದರು. ಬೆಂಗಳೂರು ಸುರಂಗ ಮಾರ್ಗ, ಟೌನ್‌ಶಿಪ್ ಹಾಗೂ ಕಸದ ವಿಲೇವಾರಿಗೆ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡುವ ಸರ್ಕಾರ, ಬರ ಪರಿಹಾರದ ವಿಚಾರದಲ್ಲಿ ಮಾತ್ರ ಕೇಂದ್ರ ಸರ್ಕಾರವನ್ನು ದೂರುವುದು ಸರಿಯಲ್ಲ. ಕೇಂದ್ರ ಸರ್ಕಾರ ಮಾನದಂಡಗಳ ಪ್ರಕಾರ ಅಧ್ಯಯನ ನಡೆಸಿ ಅನುದಾನ ಬಿಡುಗಡೆ ಮಾಡುತ್ತದೆ ಎಂದು ಹೇಳಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles