ಉಡುಪಿ : ಜಿಲ್ಲೆಯಲ್ಲಿ ತಂಬಾಕು ಉತ್ಪನ್ನಗಳ ಸಾರ್ವಜನಿಕ ಬಳಕೆ ನಿಯಂತ್ರಣ ಕಾಯಿದೆ (ಕೋಟ್ಪಾ–2003) ಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಸೂಚಿಸಿದರು. ಅವರು ಮಣಿಪಾಲದ ರಜತಾದ್ರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮದ ತೃತೀಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ಹಾಗೂ ಶೈಕ್ಷಣಿಕ ಸಂಸ್ಥೆಗಳ 100 ಮೀ. ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ನಿಷೇಧವಿದ್ದು, ನಿಯಮ ಉಲ್ಲಂಘಿಸುವ ಅಂಗಡಿ–ಮುಂಗಟ್ಟುಗಳ ಪರವಾನಿಗೆ ರದ್ದುಪಡಿಸಲು ಸ್ಥಳೀಯ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು ಎಂದರು. ತಂಬಾಕು ಮಾರಾಟಕ್ಕೆ ಪ್ರತ್ಯೇಕ ಪರವಾನಿಗೆ ಕಡ್ಡಾಯವಾಗಿದ್ದು, ಅನಿರೀಕ್ಷಿತ ದಾಳಿಗಳನ್ನು ಹೆಚ್ಚಿಸುವಂತೆ ಸೂಚನೆ ನೀಡಿದರು.

ಜಿಲ್ಲೆಯ 1069 ಶಾಲೆಗಳಲ್ಲಿ 893 ಶಾಲೆಗಳನ್ನು ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆ ಎಂದು ದೃಢೀಕರಿಸಿ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ. 2025ರ ಏಪ್ರಿಲ್ನಿಂದ 44ಕ್ಕೂ ಹೆಚ್ಚು ದಾಳಿಗಳಲ್ಲಿ 578 ಪ್ರಕರಣ ದಾಖಲಿಸಿ 98,550 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 110 ಪ್ರಕರಣಗಳಿಂದ 12,450 ರೂಪಾಯಿ ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.



