ಉಡುಪಿ: ಹೆಗ್ಗುಂಜೆ ರಾಜೀವ ಶೆಟ್ಟಿ ವೇದಿಕೆಯಲ್ಲಿ ನಿಟ್ಟೂರು ಪ್ರೌಢಶಾಲೆಯ ವಾರ್ಷಿಕೋತ್ಸವ ನಡೆಯಿತು. ಶಾಲಾ ಆಡಳಿತ ಮಂಡಳಿಯ ಸದಸ್ಯ ಹಾಗೂ ನಿಟ್ಟೂರು ಅ.ಹಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯ ಸಂತೋಷ ಕರ್ನೇಲಿಯೊ ಧ್ವಜಾರೋಹಣ ನೆರವೇರಿಸಿದರು.

ಸಾಧಕ ಹಳೆವಿದ್ಯಾರ್ಥಿಗಳಾದ ಮುರಳೀಧರ (ಟೆಕ್ನಿಕಲ್ ಕನ್ಸಲ್ಟೆಂಟ್, ಎಂಪಸಿಸ್ ಲಿಮಿಟೆಡ್), ಸೃಜನಾ ಯು. (ಆಟ್ರೀಯಾ ಪವರ್ ಕಂಪೆನಿ, ಬೆಂಗಳೂರು), ವೇದವ್ಯಾಸ ರಾವ್ (ಪುತ್ತೂರು) ಮತ್ತು ಚೈತನ್ಯ ಅಂಬಾಗಿಲು ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿಯ ಉಪಾಧ್ಯಕ್ಷ ಎಸ್.ವಿ. ಭಟ್, ಶಾಲೆಯ ಪ್ರಗತಿಗೆ ಹಳೆವಿದ್ಯಾರ್ಥಿಗಳು ಹಾಗೂ ದಾನಿಗಳ ಕೊಡುಗೆ ಸ್ಮರಿಸಿದರು. ಮುಖ್ಯ ಅತಿಥಿ ವಿಜಯಕುಮಾರ್ ಮುದ್ರಾಡಿ ಶುಭ ಹಾರೈಸಿದರು.

ಮುಖ್ಯೋಪಾಧ್ಯಾಯ ರಾಮದಾಸ್ ನಾಯ್ಕ್ ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕಿ ನಮಿತಾಶ್ರೀ ಧನ್ಯವಾದ ಸಲ್ಲಿಸಿದರು. ಲಕ್ಷ್ಮಿ ಮತ್ತು ಐಶ್ವರ್ಯ ನಿರೂಪಿಸಿದರು. ಮಧ್ಯಾಹ್ನ ಯಕ್ಷಶಿಕ್ಷಣ ಟ್ರಸ್ಟ್, ಉಡುಪಿ ನೆರವಿನೊಂದಿಗೆ ಗುರು ನಿಶ್ವಲ್ ಶೇಡ್ಗಾರ್ ನಿರ್ದೇಶನದ ‘ಧ್ರುವ ಚರಿತ್ರೆ’ ಯಕ್ಷಗಾನ ಹಾಗೂ ಉಡುಪಿ ರಂಗಭೂಮಿಯ ರಂಗಶಿಕ್ಷಣ ಅಭಿಯಾನದಡಿ ಯೋಗೀಶ್ ಕೊಳಲಗಿರಿ ನಿರ್ದೇಶನದ ‘ಕತ್ತಲೆ ನಗರ ತಲೆಕೆಟ್ಟ ರಾಜ’ ನಾಟಕ ಪ್ರದರ್ಶನಗೊಂಡಿತು.



