ಉಡುಪಿ : ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಜೀವನದ ಅಂತಿಮ ಹಂತದಲ್ಲಿಯೂ ನೋವುಮುಕ್ತವಾಗಿ, ಘನತೆ ಹಾಗೂ ನೆಮ್ಮದಿಯಿಂದ ಬದುಕುವ ಮಹತ್ವವನ್ನು ಸಾರುವ ಉದ್ದೇಶದಿಂದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ವತಿಯಿಂದ ‘ರನ್ ಆ್ಯಂಡ್ ರೈಡ್ ಫಾರ್ ಡಿಗ್ನಿಟಿ’ ಸೈಕ್ಲಿಂಗ್ ಮತ್ತು ಓಟದ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ವಿಶ್ವ ಹಾಸ್ಪಿಸ್ ಮತ್ತು ಉಪಶಾಮಕ ಆರೈಕೆ ದಿನದ ಅಂಗವಾಗಿ ಮಣಿಪಾಲ್ ಹಾಸ್ಪಿಸ್ ಆ್ಯಂಡ್ ರೆಸ್ಪೈಟ್ ಸೆಂಟರ್ ಹಾಗೂ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಉಪಶಾಮಕ ವೈದ್ಯಶಾಸ್ತ್ರ ಮತ್ತು ಪೂರಕ ಆರೈಕೆ ವಿಭಾಗದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರಾವಳಿ ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 150 ಸೈಕ್ಲಿಸ್ಟ್ಗಳು ಹಾಗೂ 150 ಓಟಗಾರರು ಪಾಲ್ಗೊಂಡರು.

ಮಂಗಳೂರಿನ ಲಾಲ್ಬಾಗ್ ಸಮೀಪದ ಕಾರ್ಪೊರೇಷನ್ ಸರ್ಕಲ್ನಿಂದ ಬೆಳಗ್ಗೆ 5.15ಕ್ಕೆ ಸೈಕಲ್ ಸವಾರಿ ಆರಂಭಗೊಂಡಿತು. ಮಾಹೆಯ ಸಹ ಕುಲಪತಿ (ಆರೋಗ್ಯ ವಿಜ್ಞಾನ) ಮೇಜರ್ ಜನರಲ್ (ಡಾ.) ಮ್ಯಾಥ್ಯೂಸ್ ಜೇಕಬ್, ವಿಎಸ್ಎಂ (ನಿವೃತ್ತ) ಚಾಲನೆ ನೀಡಿದರು. ಸೈಕ್ಲಿಸ್ಟ್ಗಳು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸುರತ್ಕಲ್, ಪಡುಬಿದ್ರಿ ಹಾಗೂ ಉಡುಪಿ ಮಾರ್ಗವಾಗಿ ಸುಮಾರು 68 ಕಿ.ಮೀ. ಕ್ರಮಿಸಿ ಕೊಳಲಗಿರಿಯ ಎಂಎಚ್ಆರ್ಸಿ ತಲುಪಿದರು.

ಮಣಿಪಾಲದ ಕಾಯಿನ್ ಸರ್ಕಲ್ನಿಂದ ಬೆಳಗ್ಗೆ 6.30ಕ್ಕೆ ಆರಂಭಗೊಂಡ ಓಟಕ್ಕೆ ಮಾಹೆ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಧಾಕರ್ ಕಂಟಿಪುಡಿ ಹಾಗೂ ಎಂಎಚ್ಆರ್ಸಿ ನಿರ್ದೇಶಕಿ, ಉಪಶಾಮಕ ವೈದ್ಯಶಾಸ್ತ್ರ ಸಲಹಾ ತಜ್ಞೆ ಡಾ. ಸೀಮಾ ರಾವ್ ಚಾಲನೆ ನೀಡಿದರು. ಓಟಗಾರರು ಎಂಎಚ್ಆರ್ಸಿಯಲ್ಲಿ ಓಟವನ್ನು ಪೂರ್ಣಗೊಳಿಸಿದರು. ಎಂಎಚ್ಆರ್ಸಿಗೆ ಆಗಮಿಸಿದ ಭಾಗಿಗಳನ್ನು ಮಾಹೆಯ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಮತ್ತು ಕುಲಪತಿ ಡಾ. ಶರತ್ ಕೆ. ರಾವ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಎಚ್.ಎಸ್. ಬಲ್ಲಾಳ್, ಉಪಶಾಮಕ ಆರೈಕೆ ಎಂದರೆ ಚಿಕಿತ್ಸೆಯನ್ನು ನಿಲ್ಲಿಸುವುದಲ್ಲ; ರೋಗಿಯ ನೋವನ್ನು ಕಡಿಮೆ ಮಾಡಿ, ಭಯವನ್ನು ದೂರಮಾಡಿ, ಜೀವನದ ಗುಣಮಟ್ಟವನ್ನು ಸುಧಾರಿಸುವುದಾಗಿದೆ. ಗಂಭೀರ ಕಾಯಿಲೆಯಿಂದ ಬಳಲುವ ಯಾರೂ ಜೀವನದ ಕೊನೆಯ ಹಂತದಲ್ಲಿ ನೆಮ್ಮದಿ ಮತ್ತು ಸಹಾನುಭೂತಿಯ ಆರೈಕೆಯಿಂದ ವಂಚಿತರಾಗಬಾರದು ಎಂಬುದು ಮಾಹೆಯ ಆಶಯವಾಗಿದೆ ಎಂದರು.

ಡಾ. ಶರತ್ ಕೆ. ರಾವ್ ಮಾತನಾಡಿ, ಉಪಶಾಮಕ ಆರೈಕೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಅನೇಕ ಕುಟುಂಬಗಳು ರೋಗಿಯ ಜೀವನದ ಕೊನೆಯ ದಿನಗಳಲ್ಲಿ ಮಾತ್ರ ಈ ಸೇವೆಯನ್ನು ಪಡೆಯಲು ಮುಂದಾಗುವುದರಿಂದ ನೋವು ನಿಯಂತ್ರಣ ಮತ್ತು ಆರೈಕೆಯ ಹಲವು ಅವಕಾಶಗಳು ಕೈತಪ್ಪುತ್ತವೆ. ಆದ್ದರಿಂದ ಆರಂಭಿಕ ಹಂತದಲ್ಲೇ ಉಪಶಾಮಕ ಆರೈಕೆಯ ನೆರವು ಪಡೆಯುವಂತೆ ಕುಟುಂಬಗಳಿಗೆ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಎಂಎಚ್ಆರ್ಸಿ ಸದಾ ನೆರವಿಗೆ ಸಿದ್ಧವಿದೆ ಎಂದು ತಿಳಿಸಿದರು. ಕಾರ್ಯಕ್ರಮಕ್ಕೆ ಮಂಗಳೂರು ರನ್ನರ್ಸ್ ಕ್ಲಬ್, ಮಣಿಪಾಲ್ ರನ್ನರ್ಸ್ ಕ್ಲಬ್, ಮಂಗಳೂರು ಸೈಕ್ಲಿಂಗ್ ಕ್ಲಬ್, ಸುರತ್ಕಲ್ ಬೀಚ್ ರನ್ನರ್ಸ್, ಉಡುಪಿ ಡಿಸ್ಟ್ರಿಕ್ಟ್ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಹಾಗೂ ಉಡುಪಿ ರನ್ನರ್ಸ್ ಕ್ಲಬ್ ಸಹಯೋಗ ನೀಡಿದವು. ತಾಜ್ ಸೈಕಲ್ಸ್ ಸೈಕ್ಲಿಂಗ್ ಪಾಲುದಾರರಾಗಿದ್ದರು. ವೈದ್ಯರು, ದಾದಿಯರು, ವಿದ್ಯಾರ್ಥಿಗಳು, ಸಿಬ್ಬಂದಿ, ಸ್ವಯಂಸೇವಕರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


