Sunday, October 11, 2026

spot_img

ಕಾಪು ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವಕ್ಕೆ ಚಾಲನೆ

ಉಡುಪಿ: ಕಾಪು ಆರಾಧ್ಯ ದೇವತೆ ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಭಾನುವಾರ ಚಾಲನೆ ನೀಡಲಾಯಿತು. ದೇವಸ್ಥಾನದ ಪ್ರಧಾನ ತಂತ್ರಿ ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿ ಕೊರಂಗ್ರಪಾಡಿ ಹಾಗೂ ವೇದಮೂರ್ತಿ ಶ್ರೀನಿವಾಸ್ ತಂತ್ರಿ ಕಲ್ಯ ಅವರು ಉಚ್ಚಂಗಿ ಸಹಿತ ಮಾರಿಯಮ್ಮನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ದೀಪ ಬೆಳಗಿಸುವ ಮೂಲಕ ಶರನ್ನವರಾತ್ರಿ ಮಹೋತ್ಸವ ಹಾಗೂ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು.

ನಂತರ ನವದುರ್ಗಾ ಲೇಖನ ಮಂಟಪದಲ್ಲಿ ಲೇಖನ ಬರೆಯುವ ಮೂಲಕ ಕಾಪಿನ ಅಮ್ಮನಿಗೆ ಅಕ್ಷರ ನಮನ ಸಲ್ಲಿಸಲಾಯಿತು. ಡಾ. ಮೋಹನ್ ಆಳ್ವ ಸೇರಿದಂತೆ ಒಂಬತ್ತು ಗಣ್ಯರು ನವದುರ್ಗಾ ಲೇಖನ ಬರೆದು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಉದ್ಘಾಟನೆ ನೆರವೇರಿಸಿ ಮಾತನಾಡಿದ ಡಾ. ಎಂ. ಮೋಹನ್ ಆಳ್ವ, ಅತ್ಯಂತ ಪುರಾತನ ಸಂಸ್ಕೃತಿಯನ್ನು ಹೊಂದಿರುವ ಕಾಪು ಹೊಸ ಮಾರಿಗುಡಿ ದೇವಸ್ಥಾನವು ದೇಶಕ್ಕೆ ಹಾಗೂ ರಾಜ್ಯಕ್ಕೆ ಮಾದರಿಯಾಗಿದೆ. ನವದುರ್ಗಾ ಲೇಖನದಂತಹ ವಿಶಿಷ್ಟ ಧಾರ್ಮಿಕ ಕಾರ್ಯಕ್ರಮದಲ್ಲಿ ನಾಡಿನ ಎಲ್ಲ ಭಕ್ತರೂ ಪಾಲ್ಗೊಳ್ಳಬೇಕು ಎಂದು ಹೇಳಿದರು. ಮುಖ್ಯ ಅತಿಥಿ ಆನಂದ್ ಎಂ. ಶೆಟ್ಟಿ ಮಾತನಾಡಿ, ನನ್ನ ತಾಯಿ ಕನಸಿನಲ್ಲಿ ಅಮ್ಮನ ದರ್ಶನ ಪಡೆದ ಬಳಿಕ ಇಲ್ಲಿಗೆ ಬರುತ್ತಿದ್ದರು. ಇಂದು ನಾನೂ ಇಲ್ಲಿಗೆ ಬರುವಂತಾಗಿದೆ. ಇಲ್ಲಿನ ತಾಯಿಯ ಶಕ್ತಿ ಅಪಾರ. ಎಂತಹ ಕಷ್ಟವನ್ನೂ ದೂರ ಮಾಡುವ ಶಕ್ತಿ ಜಗದೀಶ್ವರಿ, ಜಗನ್ಮಾತೆ ಮಾರಿಯಮ್ಮನಿಗಿದೆ. ಭಕ್ತರು ನವದುರ್ಗಾ ಲೇಖನ ಬರೆದು ಶಾಶ್ವತ ಸೇವೆಯಲ್ಲಿ ಪಾಲ್ಗೊಳ್ಳುವ ಮೂಲಕ ತಾಯಿಯ ಅನುಗ್ರಹ ಪಡೆಯಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಆರ್ಗ್ಯಾನಿಕ್ ಇಂಡಸ್ಟ್ರೀಸ್ ಪ್ರೈ. ಲಿ. ಮುಂಬೈ ಆಡಳಿತ ನಿರ್ದೇಶಕ ಆನಂದ್ ಎಂ. ಶೆಟ್ಟಿ ತೋನ್ಸೆ, ವಿಕೆ ಗ್ರೂಪ್ ಆಫ್ ಕಂಪನೀಸ್ ಪ್ರೈ. ಲಿ. ಮುಂಬೈ ಆಡಳಿತ ನಿರ್ದೇಶಕ ಕೆ. ಎಂ. ಶೆಟ್ಟಿ, ಮಾಹೆ ಮಣಿಪಾಲದ ಉಪಕುಲಪತಿ ಡಾ. ಎಚ್. ಎಸ್. ಬಳ್ಳಾಲ್, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ ಹಾಗೂ ಕಾರ್ಯನಿರ್ವಹಣಾಧಿಕಾರಿ ರವಿಕಿರಣ್ ಮತ್ತಿತರರು ಉಪಸ್ಥಿತರಿದ್ದರು.

ನಿರ್ಮಲ್ ಕುಮಾರ್ ಹೆಗ್ಡೆ ಮತ್ತು ಸತೀಶ್ ಶೆಟ್ಟಿ ಗುಡ್ಡೆಚ್ಚಿ ಕಾರ್ಯಕ್ರಮ ನಿರೂಪಿಸಿದರು. ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜರ್ಷಿ ಕೆ. ವಾಸುದೇವ ಶೆಟ್ಟಿ ಸ್ವಾಗತಿಸಿ, ಧನ್ಯವಾದ ಸಲ್ಲಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles