ಉಡುಪಿ : ಪಡುಬಿದ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಬೈಕ್ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿ ಆರೋಪಿಯನ್ನು ಬಂಧಿಸಿ ಕಳುವಾದ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶ್ಯಾಡಗುಪ್ಪಿ ಗ್ರಾಮದ ಮಂಜುನಾಥ ಫಕೀರಪ್ಪ ವಾಲಿಕಾರ ಬಂಧಿತ ಆರೋಪಿ.

ಎಪ್ರಿಲ್18 ರಾತ್ರಿ 7:45ರ ಸುಮಾರಿಗೆ ಪಡುಬಿದ್ರಿ ಶ್ರೀ ನಾರಾಯಣ ಗುರು ಮಂದಿರದ ಬಳಿಯಲ್ಲಿ, ಮುಲ್ಕಿ ಕಾರ್ನಾಡಿನ ನಿವಾಸಿ ವಾಸುದೇವ ಶೆಟ್ಟಿಗಾರ್ ಅವರು ತಮ್ಮ ತಮ್ಮನಿಗೆ ಸೇರಿದ ಯಮಹಾ ಎಫ್ಝಡ್ ಮೋಟಾರ್ ಸೈಕಲ್ ಅನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಕ್ಯಾಂಟೀನ್ಗೆ ತೆರಳಿದ್ದರು.

ಬಳಿಕ ವಾಪಸ್ಸು ಬಂದಾಗ ವಾಹನ ಕಾಣೆಯಾಗಿರುವುದು ಗಮನಕ್ಕೆ ಬಂದಿದ್ದು, ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಶೇಷ ತಂಡ ರಚಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ ಸುಮಾರು ರೂ.20,000 ಮೌಲ್ಯದ ಯಮಹಾ ಎಫ್ಝಡ್ ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.



