ಉಡುಪಿ : ವಿದ್ಯಾರ್ಥಿ ದೆಸೆಯಲ್ಲಿಯೇ ಯುವಕರಿಗೆ ಸಂವಿಧಾನ ಹಾಗೂ ಸಂಸತ್ತಿನ ಕಾರ್ಯಕಲಾಪಗಳ ಬಗ್ಗೆ ಪ್ರಾಯೋಗಿಕ ಜ್ಞಾನ ನೀಡಲು ಯುವ ಸಂಸತ್ತು ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಶಾಸಕ ಯಶ್ಪಾಲ್ ಸುವರ್ಣ ಹೇಳಿದರು. ಅವರು ತಾಲೂಕು ಆಡಳಿತ, ತಾಲೂಕು ಪಂಚಾಯತ್, ಶಿಕ್ಷಣ, ಕಾನೂನು ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಜಂಟಿ ಆಶ್ರಯದಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ನಡೆದ ಯುವ ಸಂಸತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಗುರಿ ಸಾಕಾರಗೊಳ್ಳಲು ಯುವಕರು ಸನ್ನದ್ಧರಾಗಬೇಕು. ಸಂವಿಧಾನ ಮತ್ತು ಸಂಸತ್ತಿನ ಕಾರ್ಯವಿಧಾನಗಳ ಬಗ್ಗೆ ಅರಿವು ಹೊಂದಿರುವ ಯುವಜನರು ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಬಲ್ಲರು. ಕಾನೂನು ಶಿಕ್ಷಣದತ್ತ ವಿದ್ಯಾರ್ಥಿನಿಯರ ಒಲವು ಹೆಚ್ಚುತ್ತಿರುವುದು ಸಮಾಜದಲ್ಲಿನ ಸಮಾನತೆಯ ಬೆಳವಣಿಗೆಯ ಸಂಕೇತವಾಗಿದೆ. ಇಂತಹ ಕಾರ್ಯಕ್ರಮಗಳು ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿಯೂ ಸಾಧನೆ ಮಾಡಲು ಪ್ರೇರಣೆ ನೀಡುತ್ತವೆ. ವಿದ್ಯಾರ್ಥಿಗಳು ಪೂರ್ವಾಗ್ರಹವಿಲ್ಲದೆ ಸೌಹಾರ್ದಯುತವಾಗಿ ಚರ್ಚೆಯಲ್ಲಿ ಪಾಲ್ಗೊಂಡು ಅನುಭವ ಪಡೆಯಬೇಕು ಎಂದರು.

ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ, ಯುವ ಸಂಸತ್ತು ವಿದ್ಯಾರ್ಥಿಗಳಿಗೆ ಕೇಂದ್ರ ಸಂಸತ್ತು ಹಾಗೂ ರಾಜ್ಯ ವಿಧಾನಮಂಡಲದ ಕಾರ್ಯಕಲಾಪಗಳನ್ನು ಪರಿಚಯಿಸುವ ಮಹತ್ವದ ವೇದಿಕೆಯಾಗಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಪ್ರತಿಯೊಬ್ಬರ ನಡವಳಿಕೆ ಸಂವಿಧಾನಬದ್ಧವಾಗಿರಬೇಕು. ವಿಶೇಷವಾಗಿ ಜೆನ್-ಝೀ ಮತ್ತು ಜೆನ್-ಆಲ್ಫಾ ಪೀಳಿಗೆಯಲ್ಲಿ ಸಂವಿಧಾನದ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳು ಅಗತ್ಯ. ವಿದ್ಯಾರ್ಥಿಗಳು ದ್ವೇಷ, ಅಸೂಯೆ ಮತ್ತು ಹಿಂಸೆಗೆ ಅವಕಾಶ ನೀಡದೆ ಚರ್ಚೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಮಾತನಾಡಿ, ಗ್ರಾಮ ಪಂಚಾಯತ್ನಿಂದ ಸಂಸತ್ತಿನವರೆಗೆ ಜನಪ್ರತಿನಿಧಿಗಳು ಜನರ ಆಶಯಗಳಿಗೆ ಸ್ಪಂದಿಸಬೇಕು. ಆಡಳಿತ ಮತ್ತು ವಿರೋಧ ಪಕ್ಷಗಳು ಪರಸ್ಪರ ಸಹಕಾರದೊಂದಿಗೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿ ಜನರಿಗೆ ನ್ಯಾಯ ಒದಗಿಸಬೇಕು. ಯುವ ಸಂಸತ್ತಿನಲ್ಲಿ ಪಡೆದ ಅನುಭವವನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲೆ ಸುರೇಖಾ ಕೆ. ಮಾತನಾಡಿ, ಯುವ ಸಂಸತ್ತಿನಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿರುವುದು ಸಂತಸದ ಸಂಗತಿ. ಇಂದು ಸಚಿವರ ಪಾತ್ರ ನಿರ್ವಹಿಸಿದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ನೈಜ ಆಡಳಿತ ವ್ಯವಸ್ಥೆಯಲ್ಲೂ ಜವಾಬ್ದಾರಿ ನಿಭಾಯಿಸುವ ಅವಕಾಶ ಪಡೆಯಬಹುದು. ಆಗ ಇಲ್ಲಿನ ಅನುಭವ ನೆರವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವಿಜಯಾ, ತಾಲೂಕು ವಕೀಲರ ಸಂಘದ ಅಧ್ಯಕ್ಷ ರೆನಾಲ್ಡ್ ಪ್ರವೀಣ್ ಕುಮಾರ್, ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ ನಾರಾಯಣ ಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಎಲ್ಲಮ್ಮ ಹಾಗೂ ತೀರ್ಪುಗಾರರಾದ ಎಂಜಿಎಂ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕಿ ಅದಿತಿ ಭಟ್ ಮತ್ತು ನಿವೃತ್ತ ಉಪನ್ಯಾಸಕ ಸುರೇಂದ್ರನಾಥ ಶೆಟ್ಟಿ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್ ಸ್ವಾಗತಿಸಿದರು. ಸಿಬ್ಬಂದಿ ಶ್ರೀದೇವಿ ನಿರೂಪಿಸಿದರು. ಕಚೇರಿ ಅಧೀಕ್ಷಕಿ ವಿಜಯಲಕ್ಷ್ಮಿ ವಂದಿಸಿದರು.


