Friday, October 16, 2026

spot_img

ಯಕ್ಷಗಾನದ ಹಿರಿಯ ಕಲಾವಿದ ಥಂಡಿಮನೆ ಶ್ರೀಪಾದ ಭಟ್ ನಿಧನ

ಉಡುಪಿ: ಯಕ್ಷಗಾನದ ಹಿರಿಯ ಕಲಾವಿದ, ಎರಡನೇ ವೇಷದ ಸಮರ್ಥ ಕಲಾವಿದರೆಂದೇ ಪ್ರಸಿದ್ಧರಾಗಿದ್ದ ಥಂಡಿಮನೆ ಶ್ರೀಪಾದ ತಿಮ್ಮಣ್ಣ ಭಟ್ (63) ಅವರು ಅ. 14ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು. ಅವರು ವೃದ್ಧ ತಂದೆ-ತಾಯಿ, ಪತ್ನಿ, ದತ್ತುಪುತ್ರ ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ.

ಯಕ್ಷಗಾನ ಕ್ಷೇತ್ರದಲ್ಲಿ ‘ಥಂಡಿಮನೆ’ ಎಂದೇ ಚಿರಪರಿಚಿತರಾಗಿದ್ದ ಅವರು, ಹೊಸ್ತೋಟ ಮಂಜುನಾಥ ಭಾಗವತರಲ್ಲಿ ಯಕ್ಷಗಾನ ಅಭ್ಯಾಸ ಮಾಡಿ, ಇಪ್ಪತ್ತರ ಹರೆಯದಲ್ಲೇ ಯಕ್ಷರಂಗ ಪ್ರವೇಶಿಸಿದ್ದರು. ಸ್ವತಃ ಕಲಾವಿದರಾಗಿದ್ದ ತಂದೆ ತಿಮ್ಮಣ್ಣ ಭಟ್ ಅವರ ಪ್ರೋತ್ಸಾಹವೂ ಇವರ ಕಲಾಯಾತ್ರೆಗೆ ಪ್ರೇರಣೆಯಾಗಿತ್ತು.

ಎರಡನೇ ವೇಷಕ್ಕೆ ಅಗತ್ಯವಾದ ಸ್ವರಭಾರ, ಆಳಂಗ ಮತ್ತು ರಂಗನಿರ್ವಹಣಾ ಕೌಶಲದಿಂದ ವಿಶಿಷ್ಟ ಛಾಪು ಮೂಡಿಸಿದ್ದ ಅವರು, ಶಿರಸಿ ಪಂಚಲಿಂಗ, ಶಿರಸಿ ಮಾರಿಕಾಂಬ, ಸಾಲಿಗ್ರಾಮ, ಮಂದಾರ್ತಿ ಹಾಗೂ ಕಳೆದ ಕೆಲವು ವರ್ಷಗಳಿಂದ ಪೆರ್ಡೂರು ಮೇಳದಲ್ಲಿ ಕಲಾಸೇವೆ ಸಲ್ಲಿಸಿದ್ದರು. ಸುಮಾರು ನಾಲ್ಕು ದಶಕಗಳ ಕಾಲ ಯಕ್ಷರಂಗದಲ್ಲಿ ಸಕ್ರಿಯರಾಗಿದ್ದ ಅವರು, ಈಶ್ವರ, ದಶರಥ, ಸಾಲ್ವ, ಭೀಷ್ಮ, ಕಾರ್ತವೀರ್ಯ, ಯಮ, ಶುಕ್ರಾಚಾರ್ಯ, ಯಯಾತಿ, ದುಷ್ಟಬುದ್ಧಿ, ರಕ್ತಜಂಘ, ವಲಲ ಹಾಗೂ ಕಂಸ ಮೊದಲಾದ ಪೌರಾಣಿಕ ಪಾತ್ರಗಳ ಮೂಲಕ ಕಲಾರಸಿಕರ ಮೆಚ್ಚುಗೆ ಗಳಿಸಿದ್ದರು.

ಯಕ್ಷಗಾನ ಕಲಾರಂಗ ಸಂಸ್ಥೆಯು ಎರಡು ವರ್ಷಗಳ ಹಿಂದೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿತ್ತು. ಅವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಥಂಡಿಮನೆ ಶ್ರೀಪಾದ ಭಟ್ ಅವರ ನಿಧನದಿಂದ ಯಕ್ಷಗಾನ ಕ್ಷೇತ್ರ ಓರ್ವ ಅನುಭವಿ ಕಲಾವಿದನನ್ನು ಕಳೆದುಕೊಂಡಂತಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles