Friday, November 6, 2026

spot_img

ಡೇವಿಡ್ ಡಿಸೋಜಾ ಕೊಲೆ ಪ್ರಕರಣಕ್ಕೆ ಕೆಸಿಒಸಿಎ ಕಾಯ್ದೆ ಅಸ್ತ್ರ: 10 ಮಂದಿ ಆರೋಪಿಗಳ ಬಂಧನ

ಉಡುಪಿ: ಮುದರಂಗಡಿಯ ಉದ್ಯಮಿ ಡೇವಿಡ್ ಡಿಸೋಜಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ಹೇಮಂತ್ ಪೂಜಾರಿ ಹಾಗೂ ಆತನ ಸಹಚರರ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಕೆಸಿಒಸಿಎ) ಅಡಿಯಲ್ಲಿ ತನಿಖೆ ನಡೆಸಲು ಪಶ್ಚಿಮ ವಲಯ ಪೊಲೀಸ್ ಉಪ ಮಹಾನಿರೀಕ್ಷಕರು ಅನುಮತಿ ನೀಡಿದ್ದಾರೆ. ಪ್ರಕರಣದಲ್ಲಿ ಈಗಾಗಲೇ 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿ ಹೇಮಂತ್ ಪೂಜಾರಿ ತಲೆಮರೆಸಿಕೊಂಡಿದ್ದಾನೆ. ಕಾಪು ತಾಲೂಕಿನ ಮುದರಂಗಡಿಯ ಸೇಂಟ್ ಕ್ಸೇವಿಯರ್ ಚರ್ಚ್ ಕಾಂಪ್ಲೆಕ್ಸ್‌ನಲ್ಲಿರುವ ಪ್ರಿನ್ಸ್ ಎಂಟರ್‌ಪ್ರೈಸಸ್ ಮಾಲಕ ಡೇವಿಡ್ ಡಿಸೋಜಾ ಅವರನ್ನು 2026ರ ಆಗಸ್ಟ್ 7ರಂದು ಮಧ್ಯಾಹ್ನ 3.45ರ ಸುಮಾರಿಗೆ ಮೋಟಾರು ಸೈಕಲ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಬೈಕ್‌ನ ಸಹಸವಾರ ಪಿಸ್ತೂಲಿನಿಂದ ಡೇವಿಡ್ ಅವರ ತಲೆಗೆ ಗುಂಡು ಹಾರಿಸಿ ಪರಾರಿಯಾಗಿದ್ದ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಒತ್ತಿನೆಣೆಯಲ್ಲಿ ಪೊಲೀಸರ ಮೇಲೆ ಗುಂಡಿನ ದಾಳಿ

ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಕೊಲೆಯಲ್ಲಿ ನೇರವಾಗಿ ಭಾಗಿಯಾಗಿದ್ದ ಮೂವರು ಆರೋಪಿಗಳು ಬಸ್‌ನಲ್ಲಿ ಭಟ್ಕಳದ ಕಡೆಗೆ ತೆರಳುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಅದರಂತೆ ಬೈಂದೂರಿನ ಒತ್ತಿನಾಣೆ ಬಳಿ ಬಸ್ಸನ್ನು ತಡೆದು ಪೊಲೀಸರು ತಪಾಸಣೆ ನಡೆಸಿದಾಗ, ಮೂವರು ಆರೋಪಿಗಳು ಬಸ್ಸಿನಿಂದ ಇಳಿದು ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಆರೋಪಿಗಳನ್ನು ಬೆನ್ನಟ್ಟಿದಾಗ ಓರ್ವ ಆರೋಪಿ ಕಾಪು ಠಾಣೆಯ ಪಿಎಸ್ಐ ಅವರನ್ನು ತಳ್ಳಿ, ತನ್ನ ಬಳಿಯಿದ್ದ ಪಿಸ್ತೂಲಿನಿಂದ ಗುಂಡು ಹಾರಿಸಿ ಓಡಲು ಯತ್ನಿಸಿದ್ದಾನೆ. ಆತ್ಮರಕ್ಷಣೆಗಾಗಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ಆತನ ಬಳಿಯಿದ್ದ ಪಿಸ್ತೂಲನ್ನೂ ವಶಪಡಿಸಿಕೊಳ್ಳಲಾಗಿದೆ. ಬಂಧಿತ ರಾಜು ಅಲಿಯಾಸ್ ಫಾಜಿ ಅಲಿಯಾಸ್ ಸುಭೋದ್ ಅಲಿಯಾಸ್ ರಾಜು ಹೇತ್ರಾಮ್ ಜಾಟವ್ ಎಂಬಾತನೇ ಡೇವಿಡ್ ಡಿಸೋಜಾ ಅವರಿಗೆ ಗುಂಡು ಹಾರಿಸಿ ಕೊಲೆ ಮಾಡಿದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಗೆ ಗಾಯಗೊಳಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಬೈಂದೂರು ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

10 ಮಂದಿ ಅಂದರ್, ಅಂಡರ್‌ ವರ್ಲ್ಡ್‌ ಡಾನ್‌ ಹೇಮಂತ್ ಪೂಜಾರಿ ನಾಪತ್ತೆ

ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜು (42), ಅನ್ಮೋಲ್ ರಸ್ತೋಗಿ (23), ಜಿಯಾಹುಲ್ ವಜೂಲ್ ಶೇಖ್ ಅಲಿಯಾಸ್ ದೀಪಕ್ (38), ಚಿರಾಗ್ ಪೂಜಾರಿ (24), ಮಹಮ್ಮದ್ ಇರ್ಷಾದ್ (46), ಸದಾನಂದ ದೇವಾಡಿಗ (41), ಕಿಶೋರ್ ರಾಮ ಪೂಜಾರಿ (47), ಸೂರಜ್ ಕುಮಾರ್ (31), ಲೋಕೇಶ ತೇಜ ಕೊಠಾರಿ (42) ಹಾಗೂ ಅನೂಜ್ ಕುಮಾರ್ ಕಮಲೇಶ್ವರ ಪ್ರಸಾದ್ ಪಟೇಲ್ (36) ಎಂಬ ಹತ್ತು ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣದ 11ನೇ ಆರೋಪಿಯಾಗಿರುವ ಭೂಗತ ಪಾತಕಿ ಹೇಮಂತ್ ಪೂಜಾರಿ ತಲೆಮರೆಸಿಕೊಂಡಿದ್ದಾನೆ.

ಸಂಘಟಿತ ಅಪರಾಧದ ಜಾಲದ ತನಿಖೆ

ಪ್ರಕರಣದ ತನಿಖೆಯಲ್ಲಿ ಆರೋಪಿಗಳು ಭೂಗತ ಪಾತಕಿ ಹೇಮಂತ್ ಪೂಜಾರಿ, ಅನೂಜ್ ಕುಮಾರ್ ಕಮಲೇಶ್ವರ ಪ್ರಸಾದ್ ಪಟೇಲ್ ಹಾಗೂ ಕಿಶೋರ್ ಪೂಜಾರಿ ಅವರೊಂದಿಗೆ ಸೇರಿಕೊಂಡು ಸಂಘಟಿತ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕೆಸಿಒಸಿಎ ಕಾಯ್ದೆ ಅಳವಡಿಸಲು ಪೊಲೀಸರು ಅನುಮತಿ ಕೋರಿದ್ದರು. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಮೂಲಕ ಸಲ್ಲಿಸಲಾದ ಪ್ರಸ್ತಾವನೆಯನ್ನು ಪರಿಶೀಲಿಸಿದ ಪಶ್ಚಿಮ ವಲಯ ಪೊಲೀಸ್ ಉಪ ಮಹಾನಿರೀಕ್ಷಕರು ಕೆಸಿಒಸಿಎ ಕಾಯ್ದೆಯಡಿ ತನಿಖೆ ನಡೆಸಲು ಅನುಮತಿ ನೀಡಿದ್ದಾರೆ. ಇದೀಗ ಪ್ರಕರಣದ ಆರೋಪಿಗಳು ಹಾಗೂ ಸಂಪೂರ್ಣ ತನಿಖಾ ಕಡತವನ್ನು ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ಕೋಕಾ ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗಿದೆ. ಆರೋಪಿಗಳು ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣದ ಮುಂದಿನ ತನಿಖಾಧಿಕಾರಿಯಾಗಿ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರನ್ನು ನೇಮಕ ಮಾಡಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles