ಉಡುಪಿ: ರಾಜ್ಯದಲ್ಲಿ ಹಾಲಿನ ದರ ಏರಿಕೆಯ ಬೆನ್ನಲ್ಲೇ ಬಸ್ ಪ್ರಯಾಣ ದರವನ್ನೂ ಶೇ. 23ರಿಂದ 35ರಷ್ಟು ಹೆಚ್ಚಿಸಿರುವುದನ್ನು ಖಂಡಿಸಿರುವ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಕಾಂಗ್ರೆಸ್ ಸರ್ಕಾರವನ್ನು ಗ್ಯಾರಂಟಿ ಸರ್ಕಾರವಲ್ಲ, ರಾಬರಿ ಸರ್ಕಾರ ಎಂದು ಟೀಕಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಒಂದು ಲೀಟರ್ ಹಾಲಿಗೆ ರೂ 8 ಹೆಚ್ಚಳ ಮಾಡಿ ವಾರ ಕಳೆಯುವುದರೊಳಗೆ ಬಸ್ ಪ್ರಯಾಣ ದರದಲ್ಲಿ ಶೇ. 23ರಿಂದ 35ರಷ್ಟು ಏರಿಕೆ ಮಾಡಲಾಗಿದೆ ಎಂದು ಆಕ್ಷೇಪಿಸಿದ್ದಾರೆ.

ದರ ಏರಿಕೆಯನ್ನು ಪ್ರಶ್ನಿಸಿದಾಗ ಕೇಂದ್ರ ಸರ್ಕಾರ ಇಂಧನ ಬೆಲೆ ಇಳಿಸಿದರೆ ರಾಜ್ಯದಲ್ಲಿ ಬಸ್ ದರ ಇಳಿಸುವುದಾಗಿ ಮುಖ್ಯಮಂತ್ರಿ ಉತ್ತರಿಸಿರುವುದು ಉಡಾಫೆಯ ಪ್ರತಿಕ್ರಿಯೆ ಎಂದು ಟೀಕಿಸಿರುವ ಅವರು, ಪ್ರತಿಯೊಂದು ಬೆಲೆ ಏರಿಕೆಗೂ ಕೇಂದ್ರ ಸರ್ಕಾರವನ್ನು ಹೊಣೆ ಮಾಡಿ ರಾಜ್ಯ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.

ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಹಾಲು ಮತ್ತು ಬಸ್ ಪ್ರಯಾಣ ದರ ಏರಿಕೆ ಮೂಲಕ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಇದೇನಾ ಕಾಂಗ್ರೆಸ್ ಸರ್ಕಾರದ ಸಾಧನೆ? ಜನರಿಗೆ ಬೆಲೆ ಏರಿಕೆಯ ಹೊರೆ ನೀಡಬಾರದು. ಸರ್ಕಾರದ ಜನವಿರೋಧಿ ನೀತಿಗಳಿಗೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಸುನಿಲ್ ಕುಮಾರ್ ತಮ್ಮ ಪೋಸ್ಟ್‌ನಲ್ಲಿ ಟೀಕಿಸಿದ್ದಾರೆ.


